(ವರದಿ:ಸಿಬಿಎಸ್)
ಹಾಸನ: ತೋಟದ ಮನೆಯಲ್ಲಿ ಬಟ್ಟೆ ಒಣಗಿಸಲು ತಂತಿ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಸ್ನೇಹಿತರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಸೀಕೆರೆ ತಾಲೂಕು ಚಗಚಗೆರೆ ಗ್ರಾಮದಲ್ಲಿ ನಡೆದಿದೆ.
ಚಗಚಗೆರೆ ಗ್ರಾಮದ ಬಾಳೆಗೌಡ(75) ಹಾಗೂ ಕುಡುಕುಂದಿ ಗ್ರಾಮದ ಹೊಂಬೇಗೌಡ (55) ಮೃತ ಸ್ನೇಹಿತರು.
ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದು ಅಕ್ಕ ಪಕ್ಕದಲ್ಲೇ ತೋಟ ಹೊಂದಿದ್ದರು. ಕುಡುಕುಂದಿ ಗ್ರಾಮದ ಹೊಂಬೇಗೌಡ ತೋಟಕ್ಕೆ ಬಂದಾಗ ಒಂದೆರಡು ದಿನ ಬಾಳೇಗೌಡರ ಮನೆಯಲ್ಲೇ ಉಳಿದು ಹೋಗುತ್ತಿದ್ದರು.
ಮಂಗಳವಾರ ಮಧ್ಯಾಹ್ನ 4.30ರ ಸಮಯದಲ್ಲಿ ಇಬ್ಬರು ಸೇರಿ ಬಟ್ಟೆ ಒಣಗಿಸಲು ತಂತಿ ಕಟ್ಟುತ್ತಿದ್ದ ವೇಳೆ ಮನೆಯ ಆವರಣದಲ್ಲಿ ಎಳೆದಿದ್ದ ವಿದ್ಯುತ್ ವೈರ್ ತಂತಿಗೆ ತಗಲಿ ವಿದ್ಯುತ್ ಪ್ರವಹಿಸಿದ ಕಾರಣ ಇಬ್ಬರೂ ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಡಸಿ ನಾಡಕಚೇರಿಯ ಉಪತಹಸೀಲ್ದಾರ್ ಮೋಹನ್ ಕುಮಾರ್ ಮತ್ತು ಗಂಡಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆರತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
