ಎಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಮೇಜರ್ ಸರ್ಜರಿ!

Spread the love

ಹೆಚ್.ಡಿ.ಕೋಟೆ: ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡಬೇಕಾದ ಆಸ್ಪತ್ರೆಗಳೇ ರೋಗಾಣುಗಳನ್ನು ಹರಡುವ ತಾಣವಾಗಿ ಬಿಟ್ಟರೆ ಹೇಗೆ.

ಇಂತಹ ಸ್ಥಿತಿ ಈಗ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಬಂದಿದೆ.

ಎಚ್ ಡಿ ಕೋಟೆ ತಾಲೂಕು ಕಚೇರಿ ಕೂಗಳತೆ ದೂರದಲ್ಲಿ ಈ ಸರ್ಕಾರಿ ಆಸ್ಪತ್ರೆ ಇದೆ. ಹೆಚ್ ಡಿ ಕೋಟೆ ಅಷ್ಟೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳಿಂದಲೂ ಚಿಕಿತ್ಸೆಗಾಗಿ ರೋಗಿಗಳು ಮತ್ತು ಅವರ ಸಂಬಂಧಿಕರು ಇಲ್ಲಿಗೆ ಬರುತ್ತಾರೆ.

ಈ ಆಸ್ಪತ್ರೆ ಬಹು ದೊಡ್ಡದಾಗಿದೆ,ಸದಾ ಒಳರೋಗಿಗಳು ಇರುತ್ತಾರೆ, ಆಸ್ಪತ್ರೆ ನೋಡಲು ಹೊರಭಾಗದಿಂದ ತುಂಬಾ ಚೆನ್ನಾಗಿ ಕಾಣುತ್ತದೆ. ಆದರೆ ಮೇಲೆ ತಳಕು ಒಳಗೆ ಹುಳುಕು ಎಂಬ ಗಾದೆ ಮಾತು ಈ ಆಸ್ಪತ್ರೆಗೆ ಹೇಳಿ ಮಾಡಿಸಿದಂತಿದೆ.

ಎಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ನಿಜಕ್ಕೂ ಬೇಕಿದೆ ಮೇಜರ್ ಸರ್ಜರಿ!

ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವುದರಿಂದ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಾಗಿ ಇಲ್ಲಿ ಕ್ವಾಟ್ರಸ್ ಕೂಡ ಕಟ್ಟಲಾಗಿದೆ. ಇದೇ ಆಸ್ಪತ್ರೆಗೆ ಹೊಂದಿಕೊಂಡಂತೆ ಅಂದರೆ ಹಿಂಭಾಗದಲ್ಲಿ ಹೆರಿಗೆ ಆಸ್ಪತ್ರೆ ಕೂಡ ಇದೆ. ಈ ಹೆರಿಗೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಯುಜಿಡಿ ಪೈಪ್ ಬ್ಲಾಕ್ ಆಗಿ ಸದಾ ನೀರು ಉಕ್ಕಿ ಹೊರಬರುತ್ತದೆ.

ಇದು ಒಳ್ಳೆಯ ನೀರಲ್ಲ!, ಆಸ್ಪತ್ರೆ ಒಳ ರೋಗಿಗಳ ವಿಭಾಗ ಮತ್ತು ಇತರೆ ವಿಭಾಗಗಳಿಂದ ಬರುವ ಕೊಳಕು ನೀರು.

ಟಾಯ್ಲೆಟ್ ಗಳಿಂದ ಬರುವ ಕೊಳಕು ನೀರು ಯುಜಿಡಿ ಪೈಪ್ ಹಾಗೂ ಮ್ಯಾನ್ ಹೋಲ್ ಬ್ಲಾಕ್ ಆಗಿರುವುದರಿಂದ ರಸ್ತೆಗೆ ಬಂದು ರಾಡಿಯಾಗುತ್ತಿದೆ.ಗಬ್ಬು ವಾಸನೆ ಹರಡುತ್ತಿದೆ.

ಇದರಿಂದ ಸುತ್ತಮುತ್ತಲಿನ ವಾತಾವರಣ ಹಾಳಾಗುತ್ತಿದೆ.ಹಾಗಾಗಿ ಈ ಅಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಗುಣಮುಖವಾಗುವುದಿರಲಿ ಅವರ ಸಂಬಂಧಿಕರು ಕೂಡಾ ರೋಗಿಗಳಾಗುವ ಸಾಧ್ಯತೆಯೇ ಹೆಚ್ಚು.

ಇಷ್ಟೇ ಅಲ್ಲ ಆಸ್ಪತ್ರೆಗೆ ಬಂದು ಹೋಗುವರಿಗಾಗಿ ಇಲ್ಲಿ ಕ್ಯಾಂಟೀನ್ ಕೂಡ ಇದೆ, ಇದು ಕೂಡ ಈ ಕೊಳಕು ನೀರು ರಾಡಿಯಾಗಿ ಹರಿದು ಹೋಗುವ ಸಮೀಪದಲ್ಲಿ ಇದೆ, ಇದರ ಗಬ್ಬು ವಾಸನೆಯನ್ನು ಸಹಿಸಿಕೊಂಡು ಇಲ್ಲಿ ತಿಂಡಿ ತಿನ್ನುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಇಲ್ಲಿನ ಮ್ಯಾನ್ ಹೋಲ್, ಯುಜಿಡಿ ಪೈಪ್ ಬ್ಲಾಕ್ ಆಗಿ ಒಂದು ವರ್ಷ ಕಳೆದರೂ ಇದು ಯಾರ ಗಮನಕ್ಕೂ ಬಂದಿಲ್ಲವೇ? ಇಲ್ಲಿನ ವೈದ್ಯರು,ದಾದಿಯರು,ಸಿಬ್ಬಂದಿ ಗಮನಿಸಿಲ್ಲವೆ ಎಂಬುದು ಅನುಮಾನ. ಆಸ್ಪತ್ರೆಯ ಆಡಳಿತ ಮಂಡಳಿ ಏನು ಮಾಡುತ್ತಿದೆ. ಸ್ಥಳೀಯ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳು ಇತ್ತ ನೋಡುವುದಿಲ್ಲವೇ?

ಸಾರ್ವಜನಿಕರ ಹಿತ ಕಾಪಾಡಬೇಕಾದ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಇಂತಹ ದೊಡ್ಡ ಆಸ್ಪತ್ರೆ ಕಡೆ ಗಮನ ಕೊಡದಿದ್ದರೆ ಹೇಗೆ?.

ಅಷ್ಟೇ ಏಕೆ ತಾಲೂಕು ಕಚೇರಿ ಈ ಆಸ್ಪತ್ರೆಯ ಕೂಗಳತೆ ದೂರದಲ್ಲಿ ಇದ್ದರೂ ಯಾವ ಅಧಿಕಾರಿಯೂ ಇತ್ತ ಗಮನಿಸಿಲ್ಲವೆ ಎಂಬ ಅನುಮಾನ ಕಾಡುತ್ತಿದೆ.

ಅದರಲ್ಲೂ ಹೆರಿಗೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಈ ರೀತಿ ಕೊಳಕು ನೀರು ರಾಡಿಯಾಗಿ ವಾತಾವರಣ ಕಲುಶಿತವಾಗುತ್ತಿದೆ.

ಇದರಿಂದ ಆಗ ತಾನೆ ಜನಿಸಿದ ಪುಟ್ಟ ಕಂದ ಮ್ಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ, ಬಾಣಂತಿಯರ ಗತಿ ಏನು, ಇಲ್ಲಿಂದಲೇ ರೋಗಗಳನ್ನು ಕೊಂಡು ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಆಸ್ಪತ್ರೆ ಆಡಳಿತ ಮಂಡಳಿ, ಹೆಚ್‍ ಡಿ ಕೋಟೆ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಈ ರಾಡಿಯನ್ನು ತಪ್ಪಿಸಬೇಕು,ಯುಜಿಡಿ ಪೈಪ್ ಮತ್ತು ಮ್ಯಾನ್ ಹೋಲ್ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗ ಮಳೆಗಾಲ, ಕೋವಿಡ್ ಕೂಡಾ ಹರಡುತ್ತಿದೆ ಹಾಗಾಗಿ ಅತೀ ಎಚ್ಚರ ವಹಿಸಬೇಕಿದೆ, ಈ ಕೊಳಕು ನೀರು ಇನ್ಯಾವುದಾದರೂ ಕುಡಿಯುವ ನೀರಿನ ಪೈಪ್ ಗೆ ಸೇರಿ ಅನಾಹುತವಾಗುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.