ಮಂಡ್ಯ: ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ೪೦ ಲಕ್ಷ ರೂ
ಬೆಲೆಯ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮುದಿಗೆರೆ ಗ್ರಾಮದ ಎಂ.ವಿ.ರಂಗೇಗೌಡ ಅಲಿಯಾಸ್ ಐಪಿಎಲ್ ಸಂತೋಷ (೩೭) ಬಂಧಿತ ಆರೋಪಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ೪೯೦ ಗ್ರಾಂ ಚಿನ್ನದ ವಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದು,ಅವುಗಳ ಒಟ್ಟು ಬೆಲೆ ೪೦ ಲಕ್ಷ ರೂ.ಗಳಾಗಿದೆ.
ಮೇ ೨೦ರಂದು ನಾಗಮಂಗಲ ತಾಲ್ಲೂಕಿನ ಬಿದರಕೆರೆ ಗ್ರಾಮದ ಗಂಗೇಗೌಡ ಎಂಬವರು ಬಿಂಡಿಗನವಿಲೆ ಪೊಲೀಸ್ ಠಾಣೆಗೆ ಆಗಮಿಸಿ, ಮೇ ೧೮ರಂದು ಕಳ್ಳರು ಮನೆಯ ಬೀಗ ತೆಗೆದು ಬೀರುವಿನಲ್ಲಿದ್ದ ಸುಮಾರು ೨೦ ಗ್ರಾಂ ಚಿನ್ನಾಭರಣ ಮತ್ತು ೯೭ ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಈ ಪ್ರಕರಣ ಭೇದಿಸಲು ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಬಿ.ಚಲುವರಾಜು ಅವರ ಮಾರ್ಗದರ್ಶನದಲ್ಲಿ ನಾಗಮಂಗಲ ಗ್ರಾಮಾಂತರ ಠಾಣೆಯ ಸಿಪಿಐ ಕೆ.ಎಸ್.ನಿರಂಜನ, ಪಿಎಸ್‌ಐಗಳಾದ ವೈ.ಎನ್. ರವಿಕುಮಾರ್, ಟಿ.ಮಾರುತಿ, ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಜೂ.೧ರಂದು ಹಾಸನದಲ್ಲಿದ್ದ ಆರೋಪಿ ಸಂತೋಷನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಆರೋಪಿ ಸಂತೋಷ್ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ೩, ಬೆಳ್ಳೂರು ಠಾಣೆಯಲ್ಲಿ ೪, ನಾಗಮಂಗಲ ಗ್ರಾಮಾಂತರ ೧, ತುರುವೇಕೆರೆ ಠಾಣೆ ೧, ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಹಲವು ಬಾರಿ ಸೆರೆವಾಸ ಅನುಭವಿಸಿದ್ದರೂ ಹೊರಬಂದು ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದನು ಎಂದು ವಿವರಿಸಿದರು.
ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಮಧು ಕುಮಾರ, ಇಂದ್ರಕುಮಾರ್, ರವಿಕಿರಣ್, ಲೋಕೇಶ್, ದಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘಿಸಿದರು.
ಮಂಡ್ಯ ನಗರದ ಹಲವು ಕಡೆ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರಿಂದಾಗಿ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ ಎಂದು ಎಸ್ಪಿ ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ ೧೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.