ಹೊಳೆನರಸೀಪುರದಲ್ಲಿ ವಿವಿಧ ಕಳವು ಪ್ರಕರಣ:ಆರೋಪಿಗಳ ಬಂಧನ

Spread the love

ಹಾಸನ: ಜಿಲ್ಲೆಯ ಹೊಳೆನರಸೀಪುರ ನಗರದ ವಿವಿಧ ಮನೆ ಕಳವು ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ ಸುಮಾರು 16 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.

ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಒಟ್ಟು ನಾಲ್ಕು ಪ್ರಕರಣಗಳಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಪ್ರಕರಣ 1 ರಲ್ಲಿ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಯ ತರಣ್ಯ ಗ್ರಾಮದ ನಂಜುಂಡಪ್ಪ ಅವರ ಪತ್ನಿ ಪುಷ್ಪಲತಾ ಅವರು ಮೇ 28ರಂದು ಸಂಜೆ 4.30 ರಲ್ಲಿ ಮನೆಗೆ ಬೇಗ ಹಾಕಿ ಕೀಯನ್ನು ಮನೆಯ ಬಾಗಿಲಿನ ಹೊಸ್ತಿಲಿನ ಮೇಲೆ ಇಟ್ಟು ಜಮೀನು ಕೆಲಸಕ್ಕೆ ಹೋಗಿದ್ದರು.

ಸಂಜೆ 6.15ಕ್ಕೆ ಮನೆಗೆ ಬಂದು ನೋಡಿದಾಗ ಮುಂಭಾಗಲು ತೆಗೆದಿದ್ದು ಮನೆಯ ಒಳ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಕಬ್ಬಿಣದ ಬೀರುವಿನಲ್ಲಿದ್ದ ಲಾಕರ್ ಒಡೆದು 16 ಲಕ್ಷ ಮೌಲ್ಯದ 200 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 50 ಗ್ರಾಂ ತೂಕದ ಬೆಳ್ಳಿ ಒಡವೆಯನ್ನು ಕಳವು ಮಾಡಲಾಗಿದೆ ನಂಜುಂಡಪ್ಪ ದೂರು ನೀಡಿದ್ದರು.

ನಂತರ ತನಿಖೆ ಕೈಗೊಂಡ ಪೊಲೀಸರು ನಂಜುಂಡಪ್ಪ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್ಮಿಕ ಮೊಹಮ್ಮದ್ ರಫೀಕ್ ಕೆಲದಿನಗಳಿಂದ‌ ಮನೆಯ ಮಾಲೀಕರ ಚಲನವಲನ ಪರಿಶೀಲಿಸಿ ಮನೆಯ ಮಾಲೀಕರು ಇಟ್ಟಿದ್ದ ಕೀ ಇಂದ ಬಾಗಿಲು ತೆರೆದು ಕಳ್ಳತನ ಮಾಡಿರುವುದು ತನಿಖೆ ವೇಳೆ ತಿಳಿದುಬಂದ ಹಿನ್ನೆಲೆಯಲ್ಲಿ ರಫೀಕ್ ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮನೆಯ ಮಾಲೀಕರು ಮನೆಯಿಂದ ಹೊರ ಹೋಗುವಾಗ ಬಾಗಿಲಿನ ಕೀಯನ್ನು ಗಿಡದ ಪಾಟ್ ಕೆಳಗೆ, ಕಿಟಕಿಯ ಪಕ್ಕ ಹೀಗೆ ಕಾಣುವಂತೆ ಇಡುತ್ತಿರುವ ಘಟನೆಗಳು ಹೆಚ್ಚುತ್ತಿದೆ ಎಂದು ಹೇಳಿದರು.

ಕಳ್ಳತನ ಮಾಡುವ ಉದ್ದೇಶ ಹೊಂದಿರುವ ವ್ಯಕ್ತಿಗಳು ಮನೆಯ ಮಾಲೀಕರ ಚಲನವಲನ ಗಮನಿಸಿ ಕಳ್ಳತನ ಮಾಡುತ್ತಿರುವ ಪ್ರಕರಣವು ಹೆಚ್ಚುತ್ತಿದೆ,ಹಾಗಾಗಿ ಅತಿ ಎಚ್ಚರದಿಂದ ಇರಬೇಕೆಂದು ಎಸ್ಪಿ ಸಲಹೆ ನೀಡಿದರು.

ನಂಜುಂಡಪ್ಪ ಅವರ ಮನೆ ಕಳ್ಳತನ ಪ್ರಕರಣದಲ್ಲಿಯೂ ಇದೆ ರೀತಿ ಆಗಿದೆ ಎಂದು ಹೇಳಿದ ಎಸ್ ಪಿ ಅವರು, ಮಾಲೀಕರು ಯಾವುದೇ ಕಾರಣಕ್ಕೂ ಕಿಯನ್ನು ಮನೆಯ ಬಳಿ ಇಟ್ಟು ಹೋಗದಂತೆ ತಿಳಿಹೇಳಿದರು.

ಸಾಧ್ಯವಾದರೆ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಒಳ್ಳೆಯದು ಇದರಿಂದ ಹೆಚ್ಚಿನ ಕಳ್ಳತನ ಪ್ರಕರಣ ತಡೆಯಬಹುದಾಗಿದೆ ಎಂದು ಹೇಳಿದರು.

ಪ್ರಕರಣ 2: ಮೈಸೂರು ಇಲವಾಲ ರಸ್ತೆಯ ಪಾರ್ವತಮ್ಮ ಅವರು ಮಾರ್ಚ್ 17ರಂದು ಹೊಳೆನರಸೀಪುರ ತಾಲೂಕಿನ ಅಂಕನಹಳ್ಳಿ ಗ್ರಾಮದ ರಾಮೇಗೌಡ ಕಲ್ಯಾಣ ಮಂಟಪಕ್ಕೆ ಸಂಬಂಧಿಕರ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ 35 ಗ್ರಾಂ ಚಿನ್ನದ ಸರ 22 ಗ್ರಾಂ ತೂಕದ ನೆಕ್ಲೆಸ್ ಹಾಕಿಕೊಂಡು ಹೋಗಿದ್ದರು.

ಮದುವೆ ಮುಗಿದ ಬಳಿಕ ಪರ್ಸ್ ನಲ್ಲಿ ಒಡವೆಯನೆಲ್ಲ ಇಟ್ಟುಕೊಂಡು ಮೈಸೂರಿನ ಇಲವಾಲಕ್ಕೆ ಹೋಗಲು ಬಸ್ ಹತ್ತಿದ ನಂತರ ಪರ್ಸನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ.

ನಂತರ ಅವರು ನೀಡುದ ದೂರಿನ ಅನ್ವಯ ತನಿಖೆ ಕೈಗೊಂಡು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಶಶಿ (35) ಎಂಬವರನ್ನು ದಸ್ತಗಿರಿ ಮಾಡಲಾಗಿದೆ. ಈಕೆ ಹಲವು ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ, ಸದ್ಯ ಕಳವಾಗಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಇನ್ನುಳಿದ ಎರಡು ಪ್ರಕರಣದಲ್ಲಿ ಹೊಳೆನರಸೀಪುರ ಬಸ್ ನಿಲ್ದಾಣ ದಲ್ಲಿ 2024 ನವೆಂಬರ್ 28 ಹಾಗೂ ಸೆಪ್ಟೆಂಬರ್ 23ರಂದು ಬಸ್ ನಲ್ಲಿ ಎರಡು ಸರ ಕಳ್ಳತನ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಂಧ್ರಪ್ರದೇಶದ ಚಿತ್ತೂರಿನ ಮಾಧವಿ, ಅಕೀಲ, ವಿದ್ಯಾ ಎಂಬುವರನ್ನು ಬಂಧಿಸಲಾಗಿದ್ದು,ಸುಮಾರು 2,65,000 ಮೌಲ್ಯದ ಒಟ್ಟು 64 ಗ್ರಾಂ ಚಿನ್ನದ ಆಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮೊಹಮ್ಮದ್ ಸುಜಿತಾ ತಿಳಿಸಿದರು.