ಬೆಂಗಳೂರು: ಐಪಿಎಲ್ ಕಪ್ ಗೆದ್ದಿರುವ ಆರ್ ಸಿ ಬಿ ತಂಡ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿ ಅಮಾಯಕರ ಸಾವಿಗೆ ಕಾರಣರಾದ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಪ್ ಆಗ್ರಹಿಸಿದೆ.
ಈ ಸಮಾರಂಭಕ್ಕೆ ಯಾವುದೇ ಪೂರ್ವಭಾವಿ ಸಭೆಗಳನ್ನು ನಡೆಸದೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ, ಆತುರಾತುರವಾಗಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿ ಕಾಲ್ತುಳಿತದಿಂದ ಅಮಾಯಕರ ಸಾವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರಣರಾಗಿದ್ದಾರೆ ಹಾಗಾಗಿ
ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.
ಆರ್ ಸಿ ಬಿ ಅಭಿಮಾನಿಗಳ ನೆಪದಲ್ಲಿ ಕೆಲ ಪುಂಡರು ನಿನ್ನೆ ರಾತ್ರಿಯಿಂದಲೇ ಕುಡಿದ ಮತ್ತಿನಲ್ಲಿ ಬೆಂಗಳೂರಿನಾದ್ಯಂತ ಎಲ್ಲಾ ಕಡೆಗಳಲ್ಲಿ ತಮ್ಮ ಹುಚ್ಚಾಟ ಮೆರೆದಿದ್ದರು. ಇದರ ಸೂಕ್ಷ್ಮ ಅರಿಯದ ಸರ್ಕಾರ ಅತುರಾತುರವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದ ಆಯೋಜನೆಯ ಹಿಂದೆ ಡಿ.ಕೆ. ಶಿವಕುಮಾರ್ ಅವರ ಅತಿಯಾದ ಆಸಕ್ತಿಯೇ ಈ ಎಲ್ಲ ಅವಘಡಗಳಿಗೆ ಕಾರಣವಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸುರಕ್ಷತೆ, ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲು ಸಮಯವೇ ಇಲ್ಲದಂತೆ ತರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅಭಿಮಾನಿಗಳ ಸಾವಿಗೆ ಡಿಸಿಎಂ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.