ಮೈಸೂರು: ಚಿನ್ನದ ಸರ ಕಳ್ಳತನ ಮಾಡಿ ಗಿರಿವಿ ಇಟ್ಟು ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಹತ್ಯೆ ಮಾಡಿದ ಪ್ರಕರಣವನ್ನು ಮೈಸೂರಿ ಜಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ ಕೊಲೆಯಾದ ಯುವಕ.
60 ಗ್ರಾಂ ಚಿನ್ನಕ್ಕಾಗಿ ಯುವಕನನ್ನು ಕಾರಿನಲ್ಲೇ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಸುಟ್ಟು ಹಾಕಿದ್ದರು.
ಕಳೆದ ಏಪ್ರಿಲ್ 18ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸಿದ ಜಯಪುರ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ, ದರ್ಶನ್ ಬಂಧಿತ ಆರೋಪಿಗಳು,ಪ್ರಮುಖ ಆರೋಪಿ ಶ್ರೀನಿವಾಸ್ ತಲೆಮರೆಸಿ ಕೊಂಡಿದ್ದಾನೆ.
ಹಿನ್ನೆಲೆ:
ಮೃತ ಮೋಹನ್ ಕುಮಾರ್ ಲಾಡ್ಜ್‌ವೊಂದರಲ್ಲಿ ಮ್ಯಾನೇಜರ್ ಆಗಿದ್ದ. ಈ ಲಾಡ್ಜ್‌ಗೆ ಇಸ್ಪೀಟ್ ಆಡಲು ಬರುತ್ತಿದ್ದ ಆರೋಪಿ ಶ್ರೀನಿವಾಸ್, ಮೋಹನ್ ಕುಮಾರ್‌ಗೆ ಪರಿಚಯವಾಗಿದ್ದ.
ಶ್ರೀನಿವಾಸ್ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಗಿರವಿ ಅಂಗಡಿಯವರು ಅಂದು ಗಿರವಿ ಇಟ್ಟುಕೊಂಡಿರಲಿಲ್ಲ. ಹಾಗಾಗಿ ಲಾಡ್ಜ್ ರೂಂನಲ್ಲಿ ತಲೆದಿಂಬಿನ ಕೆಳಗೆ ಚಿನ್ನದ ಸರ ಇಟ್ಟಿದ್ದ.
ಇದನ್ನು ನೋಡಿದ್ದ ಮೋಹನ್ ಕುಮಾರ್, ಚಿನ್ನದ ಸರವನ್ನು ಕದ್ದು,ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ತೆರಳಿ ಆ ಸರವನ್ನು ಗಿರವಿಯಿಟ್ಟು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ.
ಈ ಬಗ್ಗೆ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶ್ರೀನಿವಾಸ್, ಮೋಹನ್ ಕುಮಾರ್‌ನನ್ನು ಮನೆಯಿಂದ ಕರೆಸಿಕೊಂಡು ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ.
ಬಳಿಕ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟು ಹಾಕಿ ಶ್ರೀನಿವಾಸ್ ಮತ್ತು ಸಂಗಡಿಗರು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.