ಮಕ್ಕಳಿಗೆ ಶಿಕ್ಷಣ ಕಲಿಸಿ ಸಂಸ್ಕಾರವಂತರಾಗಿಸಿ:ಜಿಟಿಡಿ

ಮೈಸೂರು: ಮಕ್ಕಳಿಗೆ ಶಿಕ್ಷಣ ಕೊಟ್ಟು,
ಬುದ್ದಿವಂತರನ್ನಾಗಿ ಮಾಡುವ ಜತೆಗೆ,
ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಮೈಸೂರು ತಾಲ್ಲೂಕು ನಾಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳು ಬೆಳಿಗ್ಗೆ ಎದ್ದ ತಕ್ಷಣ ಯೋಗ,ಧ್ಯಾನ ಮಾಡಬೇಕು. ನಂತರ,ಶಾಲೆಗೆ ಬಂದಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಬುದ್ದಿಮಾತು ಹೇಳಿದರು.

ಮುಖ್ಯಶಿಕ್ಷಕರು-ಸಹ ಶಿಕ್ಷಕರು ಎನ್ನುವ ಬೇಧ-ಭಾವ ಇಲ್ಲದೆ ಪರಸ್ಪರ ಪ್ರೀತಿಯಿಂದ ಕೆಲಸ ಮಾಡಬೇಕು, ಎಲ್ಲರೂ ಸರ್ವಜ್ಞರಲ್ಲ, ಒಂದೊಂದು ವಿಷಯದಲ್ಲಿ ಒಬ್ಬೊಬ್ಬರು ಪರಿಣಿತರಾಗಿರುವ ಕಾರಣ ಅಗತ್ಯಬಿದ್ದರೆ ಮುಖ್ಯಶಿಕ್ಷಕರು ಸಹ ಶಿಕ್ಷಕರ ಸಲಹೆ ಪಡೆಯಬೇಕು ಎಂದು ಜಿಟಿಡಿ ಕಿವಿಮಾತು ಹೇಳಿದರು.

ಮಕ್ಕಳಿಗೆ ಶಾರದಾಂಬೆಯ ಆಶೀರ್ವಾದ ಇರಬೇಕು,ಪೋಷಕರು,ತಂದೆ-ತಾಯಿ,ಗುರುಗಳ ಆಶೀರ್ವಾದ ಸದಾ ಮಕ್ಕಳ ಮೇಲೆ ಇರಬೇಕು. ಇಂದಿನ ಮಕ್ಕಳಿಗೆ ನೈತಿಕ,ಮಾನವೀಯ ಶಿಕ್ಷಣ ಕಲಿಸಿ ಸಂಸ್ಕಾರವಂತರಾಗುವಂತೆ ಮಾಡಬೇಕು. ಅದಕ್ಕೆ ತಕ್ಕಂತೆ ಶಿಕ್ಷಕರು ಶಿಕ್ಷಣ ಕಲಿಸಬೇಕು ಜಿಟಿಡಿ ಎಂದು ಸಲಹೆ ನೀಡಿದರು.

ಸರ್ಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಹೇಳಬೇಕು. ಸಂಬಳಕ್ಕೆ ಕೆಲಸ ಮಾಡದೆ ಮಾನವೀಯತೆ,ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ನುಡಿದರು.

ಮಕ್ಕಳಿಗೆ ಕಲೆ,ನಾಟಕ,ಸಾಹಿತ್ಯವನ್ನು ಕಲಿಸಬೇಕು. ಶಿಕ್ಷಣ ಕಲಿಸುವುದಕ್ಕೆ ಸೀಮಿತವಾಗದೆ ಸಂಸ್ಕಾರಯುತ ಶಿಕ್ಷಣ ಕಲಿಸಬೇಕು. ಎಷ್ಟೇ ದೊಡ್ಡವರಾದರೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಸ್ಟ್ರು ರಾಚಪ್ಪ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ನುಡಿದರು.

ಇದಕ್ಕೂ ಮೊದಲು ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಿಹಿ ಕೊಟ್ಟು ಬರಮಾಡಿಕೊಳ್ಳಲಾಯಿತು.

ಜಿಪಂ ಮಾಜಿ ಸದಸ್ಯರಾದ ಜವರೇಗೌಡ, ದಿನೇಶ್, ಗ್ರಾಪಂ ಅಧ್ಯಕ್ಷರಾದ ರಶ್ಮಿ, ಮಾಜಿ ಅಧ್ಯಕ್ಷ ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮುಖಂಡರಾದ ಮಾಲೇಗೌಡ, ಮಹದೇವಪ್ಪ, ವಿಜಯಶಂಕರ್, ರಾಜು, ಭವ್ಯ, ಜನಾರ್ಧನ್,ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.