ಸಾವರ್ಕರ್ ವಿಚಾರದಲ್ಲಿ ರಾಜಕೀಯ ಬೆರೆಸಬಾರದು: ಮಹದೇವಸ್ವಾಮಿ

Spread the love

ಮೈಸೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯ ವೀರ ಸಾವರ್ಕರ್ ವಿಚಾರವಾಗಿ ರಾಜಕೀಯ ಬೆರೆಸಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ ತಿಳಿಸಿದರು.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ
ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಜಯಂತಿ ಅಂಗವಾಗಿ 40 ಜನ ದೇಶಪ್ರೇಮಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ವೇಳೆ
ಮಹದೇವಸ್ವಾಮಿ ಮಾತನಾಡಿದರು.

ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ಇದರ ನಡುವೆ ಅನೇಕ ಯುವಕರು ಇಂದಿಗೂ ಸಾವರ್ಕರ್ ಹೆಸರಿನಲ್ಲಿ ಸೇವಾಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಾಜಿ ಮಹಾಪೌರ ಸಂದೇಶ ಸ್ವಾಮಿ ಮಾತನಾಡಿ,ಸಾವರ್ಕರ್ ವಿಚಾರಗಳನ್ನು ಇಂದಿನ ಯುವಕರು ಓದಬೇಕು, ಸಾವರ್ಕರ್ ಬಗ್ಗೆ ರಾಜಕೀಯ ಕಾರಣಗಳಿಂದ ಅಪ ಪ್ರಚಾರಗಳಾಗುತ್ತಿದ್ದು, ಜನರೇ ಇಂತಹ ಸೇವಾ ಕಾರ್ಯಕ್ರಮಗಳ ಮೂಲಕ ಸೂಕ್ತ ಉತ್ತರ ನೀಡಬೇಕಿದೆ ಎಂದು ಸಲಹೆ ನೀಡಿದರು.

ಬಾಲ್ಯದಲ್ಲಿಯೇ ಬಾಲಗಂಗಾಧರ ತಿಲಕ್ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಾವರ್ಕರ್ ಅವರು, ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಮಾಡಿದ ಸಂಕಲ್ಪ ಸದಾ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಾಗಮಣಿ, ಶಿವು ಪಟೇಲ್, ಸುಚೇಂದ್ರ, ಮೀರ್ಲೆ ಪನೀಶ್, ಸುರೇಶ್, ಮಮತಾ ಮತ್ತಿತರರು ಹಾಜರಿದ್ದರು.