ಮೈಸೂರು: ನೈಋತ್ಯ ರೈಲ್ವೆ, ಮೈಸೂರು ವಿಭಾಗದ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ತ್ವರಿತ ಕಾರ್ಯಾಚರಣೆ ಯಿಂದ ಮಹಿಳಾ ಪ್ರಯಾಣಿಕರಿಗೆ ಅಮೂಲ್ಯ ವಸ್ತುಗಳಿದ್ದ ವ್ಯಾನಿಟಿ ಬ್ಯಾಗ್ ಲಭ್ಯವಾದಂತಾಗಿದೆ.
ಸುಮಾರು 1,49,465 ರೂ ಮೌಲ್ಯದ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ವ್ಯಾನಿಟಿ ಬ್ಯಾಗ್ ಅನ್ನು ಮಹಿಳೆಗೆ ಯಶಸ್ವಿಯಾಗಿ ಮರಳಿಸಿದ್ದಾರೆ.

ಮೇ 21 ರಂದು, ಕಡೂರು ನಿವಾಸಿ ತೇಜಾ ಅವರು ರೈಲು ಸಂಖ್ಯೆ 16589 ರಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಬ್ಯಾಗ್ ಅನ್ನು ಆಕಸ್ಮಿಕವಾಗಿ ಬಿಟ್ಟು ಹೋಗಿದ್ದರು.
ಈ ಬಗ್ಗೆ ದೂರನ್ನು ಸ್ವೀಕರಿಸಿದ ತಕ್ಷಣ, ಆರ್‌ಪಿಎಫ್ ಎಸ್ಕಾರ್ಟ್ ತಂಡವು ರೈಲಿನಲ್ಲಿ ಹುಡುಕಾಟ ನಡೆಸಿ ಬ್ಯಾಗ್ ಅನ್ನು ಪತ್ತೆಹಚ್ಚಿ, ಆ ಬ್ಯಾಗ್ ಅನ್ನು ದಾವಣಗೆರೆಯ ಆರ್‌ಪಿಎಫ್ ಪೋಸ್ಟ್‌ಗೆ ಹಸ್ತಾಂತರಿಸಲಾಯಿತು.
ಸೂಕ್ತ ಪರಿಶೀಲನೆಯ ನಂತರ, 15 ಗ್ರಾಂ ಚಿನ್ನಾಭರಣ ಮತ್ತು ಎರಡು ಐಫೋನ್ ಚಾರ್ಜರ್ ಗಳನ್ನು ಒಳಗೊಂಡ ವಸ್ತುಗಳು ಇದ್ದ ವ್ಯಾನಿಟಿ ಬ್ಯಾಗನ್ನು ಮೇ.22 ರಂದು ಮಾಲೀಕರಿಗೆ ಹಿಂದಿರುಗಿಸಲಾಯಿತು.
ಮೈಸೂರು ವಿಭಾಗದ ಹಿರಿಯ ವಿಭಾಗೀಯ ಆಯುಕ್ತ, ಆರ್‌ಪಿಎಫ್, ಸ್ಯಾಮ್ ಪ್ರಸಾಂತ್ ಜೆ.ಆರ್, ಆಪರೇಷನ್ ಅಮಾನತ್ ಅಡಿಯಲ್ಲಿ ತಂಡದ ಪ್ರಾಮಾಣಿಕ ಕರ್ತವ್ಯವನ್ನು ಶ್ಲಾಘಿಸಿದರು.
2024-25ನೇ ಆರ್ಥಿಕ ವರ್ಷದಲ್ಲಿ ಆರ್‌ಪಿಎಫ್ ಸಿಬ್ಬಂದಿ 197 ಕಳೆದುಹೋದ ಸಾಮಾನುಗಳನ್ನು ಮರಳಿಸಿದ್ದು, 52.62 ರೂ. ಲಕ್ಷ ಮೌಲ್ಯದ ವಸ್ತುಗಳನ್ನು ಮರಳಿಸಿದ್ದಾರೆ ಎಂದು ತಿಳಿಸಿದರು.
ಪ್ರಯಾಣಿಕರು ಕೂಡಾ ಆರ್‌ಪಿಎಫ್‌ನ ಸತ್ಯನಿಷ್ಠೆ ಮತ್ತು ತ್ವರಿತ ಸ್ಪಂದನೆಗಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.