ಮೈಸೂರು: ಸಾಮಾನ್ಯರಂತೆ ವಿಶೇಷಚೇತನರು ಕೂಡಾ ಕ್ರೀಡೆಯಲ್ಲಿ ಸಾಧನೆ ಮಾಡಿ ಬಹುಮಾನ ಗೆಲ್ಲುತ್ತಿರುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ವೀಲ್‌ಚೇರ್ ಕ್ರಿಕೆಟ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಟಿಡಿ ಮಾತನಾಡಿದರು.

ಮೊದಲು ವಿಶೇಷಚೇತನರು ಓದು ಸೇರಿದಂತೆ ಇನ್ನಿತರ ಆಟೋಟಗಳಲ್ಲಿ ಹಿಂಜರಿಯುತ್ತಿದ್ದರು.ಆದರೆ,ಬದಲಾದ ಕಾಲದಲ್ಲಿ ತಮ್ಮ ದೈಹಿಕ ಸಾಮರ್ಥ್ಯವನ್ನು ತೋರಿ ಭಾಗಿಯಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರು ಮತ್ತು ವಿದ್ಯಾರ್ಥಿಗಳು ಕ್ರಿಕೆಟ್ ಕಬ್ಬಡಿ ಮತ್ತಿತರ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ ಆದರೆ, ಕ್ರಿಕೆಟ್ ಪ್ರಮುಖ ಮತ್ತು ದೈಹಿಕವಾಗಿ ಆಡುವ ಕ್ರೀಡೆ. ಇದರಲ್ಲಿ ಹೆಚ್ಚು ಗಾಯಗಳಾಗುವ ಸಂಭವ ಹೆಚ್ಚು, ಸಾಹಸ ಕ್ರೀಡೆಯಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ ಎಂದು ಆಟವಾಡಿ ತೋರಿಸುತ್ತಿದ್ದೀರಿ ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಕ್ರೀಡೆ ಮೂಲಕ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೀರಿ, ಮುಂದಿನ ಕ್ರೀಡೆಯ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೋಳ್ಳತ್ತೇನೆ, ನೆರವು ಮತ್ತು ಪ್ರೊತ್ಸಾಹ ನೀಡುತ್ತೇನೆ ಎಂದು ಜಿ.ಟಿ.ದೇವೇಗೌಡ ಭರವಸೆ ನೀಡಿದರು.
ಕ್ರಿಕೆಟ್ ಸ್ಪರ್ಧೆ ಏರ್ಪಡಿಸುವ ಜತೆಗೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಹುವಾನವನ್ನು ಗಳಿಸಬೇಕು ಎಂದು ಸಲಹೆ ನೀಡಿದರು.
ವಿಶೇಷಚೇತನರು ಶಾಪವಲ್ಲ.ದೇವರು ಕೊಟ್ಟ ಮಕ್ಕಳೆಂದು ಭಾವಿಸಬೇಕು. ಅವರಿಗೆ ವೇದಿಕೆ ಕೊಟ್ಟು ಅವಕಾಶ ನೀಡಿದರೆ ಇತರರಂತೆ ತಮ್ಮ ಪ್ರತಿಭೆ,ಸಾಮಾರ್ಥ್ಯವನ್ನು ಪ್ರದರ್ಶಿಸಬಲ್ಲರು ಎಂದು ಜಿಟಿಡಿ ತಿಳಿಸಿದರು.