ಮೈಸೂರು: ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ
ಮೈಸೂರಿನಲ್ಲಿ ಹಲವು ಸಂಘಟನೆಗಳ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಹಿತರಕ್ಷಣಾ ವೇದಿಕೆ, ಶ್ರೀ ದುರ್ಗಾ ಫೌಂಡೇಶನ್ ಪದಾಧಿಕಾರಿಗಳು 101 ಗಣಪತಿ ದೇವಸ್ಥಾನದ ಮುಂಭಾಗ ಕನ್ನಡ ಮಾತೆಗೆ ಹಾಗೂ ಬಾನು ಮುಷ್ತಾಕ್ ಅವರಿಗೆ ಜೈಕಾರ ಕೂಗುತ್ತಾ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡಿಕೆರೆ ಗೋಪಾಲ್
ಕನ್ನಡದ ನೆಲದ ಸೌಹಾರ್ದತೆ, ಜಾತ್ಯಾತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಭಾನು ಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಾಡಿಗೆ ಗೌರವ ತಂದು ಕೊಟ್ಟಿದ್ದಾರೆ,ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಜಗದಗಳಕ್ಕೆ
ಕನ್ನಡದ ಕಂಪು ಪಸರಿಸಲಿ ಎಂದು ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ
ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಎದೆಯ ಹಣತೆಯನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು. ಬಾನು ಮುಸ್ತಾಕ್ ಅವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಮೂಡಿ ಬರಲಿ, ಸಾಹಿತ್ಯ ಸೇವೆಯ ಲೋಕದಲ್ಲಿ ಅವರು ಮತ್ತಷ್ಟು ಹೆಸರು ಮಾಡಲಿ ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್ ಮಾತನಾಡಿ
ಲೇಖಕಿ ಬಾನು ಮುಷ್ತಾಕ್ ಅವರು ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವುದು ನಮ್ಮ ನಾಡಿನ ಹೆಮ್ಮೆ. ಅವರಿಂದ ಇದೇ ರೀತಿ ಇನ್ನಷ್ಟು ಉತ್ತಮ ಕೃತಿಗಳು ಬಂದು ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,ಜಿ ರಾಘವೇಂದ್ರ,
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಎಸ್.ಎನ್ ರಾಜೇಶ್, ರಂಗನಾಥ್, ಚಕ್ರಪಾಣಿ,ನೀತು,ಮೋಹನ್ ಕುಮಾರ್, ಬಾಬಣ್ಣ, ಹೇಮಾ, ಪಾಂಡು ಮತ್ತಿತರರು ಹಾಜರಿದ್ದರು.