(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕಳೆದ ಒಂದು ದಶಕದಿಂದ ಅಭಿವೃದ್ಧಿ ಕಾಣದೆ ಹಾಳಾಗಿದ್ದ ಬಂಡಳ್ಳಿ- ಹನೂರು,ಮೋಡಹಳ್ಳಿ- ದೊಡ್ಡಿಂದುವಾಡಿ ಹಾಗೂ ಚಿಕ್ಕಲ್ಲೂರು ರಸ್ತೆಗಳು ಸೇರಿದಂತೆ 6 ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 67 ಕೋಟಿ ರೂ.ಗಳ ಅನುಧಾನದಡಿ ಕ್ಫೇತ್ರದ ರಸ್ತೆಗಳ ಆಯ್ದ ಭಾಗಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

25 ಕೋಟಿ ವೆಚ್ಚದಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೋಡಹಳ್ಳಿ ವೃತ್ತದಿಂದ ದೊಡ್ಡಿಂದುವಾಡಿ ವೃತ್ತದವರೆಗೆ ದೊಡ್ಡಿಂದುವಾಡಿ-ಕನಕಗಿರಿ ರಸ್ತೆ, ಕೊತ್ತನೂರು ಗ್ರಾಮದಲ್ಲಿ ಮೊಳಗನಕಟ್ಟೆಯಿಂದ ಕೊತ್ತನೂರು ಗ್ರಾಮದ ಅಂಬೇಡ್ಕರ್ ಪ್ರತಿಮೆ ವರೆಗಿನ ಚಿಕ್ಕಲ್ಲೂರು ರಸ್ತೆ ಆಯ್ದ ಭಾಗಗಳಲ್ಲಿ 9 ಕಿ.ಮೀ. ರಸ್ತೆ, 24.80 ಕೋಟಿ ವೆಚ್ಚದಲ್ಲಿ ಬಂಡಳ್ಳಿಯಲ್ಲಿ ಬಂಡಳ್ಳಿ ರಸ್ತೆ ಹಾಗೂ ಜಿ.ವಿ.ಗೌಡ ಕಾಲೇಜು ಬಳಿ ಬಂಡಳ್ಳಿ- ಹನೂರು ರಸ್ತೆ,ಆಯ್ದ ಭಾಗಗಳಲ್ಲಿ 10.470 ಕಿ.ಮೀ. ರಸ್ತೆ, ಹಾಗೆಯೇ 17 ಕೋಟಿ ರೂ. ವೆಚ್ಚದಲ್ಲಿ ಹನೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹನೂರು, ರಾಮಾಪುರ- ಕೌದಳ್ಳಿ ಆಯ್ದ ಭಾಗಗಳಲ್ಲಿ ರಸ್ತೆ ಆಭಿವೃಧ್ಧಿ, ಹಾಗೂ ಕೌದಳ್ಳಿ – ರಾಮಾಪುರ ಮುಖ್ಯ ರಸ್ತೆ ಬಳಿ ಕೌದಳ್ಳಿ ಚರ್ಚ್ ರಸ್ತೆ ಸೇರಿದಂತೆ 67 ಕೋಟಿ ರೂ ವೆಚ್ಚದಲ್ಲಿ ಸುಮಾರು 30 ಕಿ.ಮೀ. ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಂಜುನಾಥ್, ಈ ಅನುದಾನ ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಸಿ ರಸ್ತೆ ಮಾಡಲು ಮೀಸಲಿಡಲಾಗಿತ್ತು.ಈ ಅನುಧಾನದ ಬಳಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದಾಗಿತ್ತು. ಆದರೆ ಹನೂರಿನಿಂದ ಪಾಲರ್ ವರೆಗೆ ರಸ್ತೆ ಅಭಿವೃದ್ಧಿಗೆ ಬಜೆಟ್ ನಲ್ಲಿ ಪ್ರಸ್ತಾಪವಾಗಿ ಕೆಶಿಫ್ ಯೋಜನೆಯಡಿ ನಿರ್ಮಿಸಲು ತೀರ್ಮಾನವಾದ ನಂತರ ಅದೇ ಅನುಧಾನವನ್ನು ಈ ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದರು ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನಾನು ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇನೆ
ಅಭಿವೃದ್ಧಿಗಾಗಿ ಸುಮಾರು ಒಂದೂವರೆ – ಎರಡು ವರ್ಷಗಳಿಂದ ಬಹಳಷ್ಟು ಹೊಂ ವರ್ಕ್ ಮಾಡಿದ್ದೇನೆ. ಅದರಲ್ಲೂ ನೀರಾವರಿ ಯೋಜನೆಗಾಗಿ ಕ್ರಾಂತಿಯೇ ಆಗಿದೆ. ತೆಳ್ಳನೂರು ನೀರಾವರಿ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ದಿಂದ ಅನುದಾನ ಮಂಜೂರಾಗಿದೆ. ಇದರಲ್ಲಿ ಎಕರೆಗೆ ತೆಳ್ಳನೂರು ರೈತರಿಗೆ 24 ಲಕ್ಷ ಚಿಕ್ಕಲ್ಲೂರು ರೈತರಿಗೆ 16 ಲಕ್ಷದಂತೆ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗುಂಡಲ್ ಜಲಾಶಯದ ಅಭಿವೃದ್ಧಿಗೆ 80 ಕೋಟಿ ರೂ. ಅನುದಾನ ಕೇಳಿದ್ದೇನೆ. ಈಗಾಗಲೇ ರಾಮನಗುಡ್ಡ, ಉಬ್ಬೆಹುಣಸೆ ಜಲಾಶಯಗಳಿಗೆ ಸರ್ಕಾರ 52 ಕೋಟಿ ಅನುದಾನ ಬಿಡುಗಡೆ ಮಾಡಿದೆ ಈ ಅನುದಾನದಲ್ಲಿ ಜಲಾಶಯಗಳ ಹೂಳು ತೆಗೆದು ಪೈಪ್ಲೈನ್ ಮಾಡಲು ತಕ್ಷಣ ಟೆಂಡರ್ ಕರೆಯಲಾಗುವುದು. ಒಟ್ಟಾರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮ ಹಾಕಲಾಗಿದೆ ಎಂದು ತಿಳಿಸಿದರು.
ಬಂಡಳ್ಳಿಯಲ್ಲಿ ಸಂಭ್ರಮ:
ಕಳೆದ 25 ವರ್ಷಗಳ ಹಿಂದೆ ಅಭಿವೃದ್ಧಿಯಾಗಿದ್ದ ಬಂಡಳ್ಳಿ ರಸ್ತೆ ಹತ್ತು ವರ್ಷಗಳ ನಂತರ ಹಾಳಾಗಿ ಗುಂಡಿ ಬಿದ್ದಿತ್ತು.ಇದರಿಂದ ಸಂಚಾರಕ್ಕೆ ತೊಡಕಾಗಿ ಈ ಭಾಗದ ಜನ ನಿತ್ಯ ನರಕಾಯತನೆ ಆಗಿತ್ತು. ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಜನರು ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದರೂ ಗಮನ ಹರಿಸದ ಕಾರಣ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿರುವುದರಿಂದ ಕ್ಷೇತ್ರದ ಜನರು ಖುಷಿಯಾಗಿದ್ದಾರೆ.
ಶಾಸಕರು ಗುದ್ದಲಿ ಪೂಜೆಗೆಂದು ಬಂಡಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.

ಸುಮಾರು ಅರ್ಧ ಕಿಲೋಮೀಟರ್ ವರೆಗೆ ಶಾಸಕರನ್ನು ಮೆರವಣಿಗೆ ಮೂಲಕ ಗುದ್ದಲಿ ಪೂಜೆ ನಡೆಯುವ ಸ್ಥಳಕ್ಕೆ ಕರೆತಂದು ಸಂಭ್ರಮದಿಂದ ಗುದ್ದಲಿ ಪೂಜೆ ನೆರವೇರಿಸಿದರು.

ಹನೂರಿನ ಶಾಸಕ ಮಂಜುನಾಥ್ ಅವರು ಜೆ.ಡಿ.ಎಸ್ ಪಕ್ಷದವರಾಗಿದ್ದು ತಮ್ಮ ಸರ್ಕಾರವಿಲ್ಲದಿದ್ದರೂ ಪ್ರಸ್ತುತ ಕಾಂಗ್ರೆಸ್ ಸರ್ಕಾರದೊಡನೆ ಹೋರಾಟ ಮಾಡಿ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಈ ರಸ್ತೆಗಳ ಅಭಿವೃದ್ಧಿಗೆ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಚಾಲನೆ ನೀಡಬೇಕಾಗಿತ್ತು ಆದರೆ ತಾಂತ್ರಿಕ ಸಮಸ್ಯೆಯಿಂದ ತಡವಾಗಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ.
ಗುದ್ದಲಿ ಪೂಜೆ ಸಂದರ್ಭದಲ್ಲಿ
ದೊಡ್ಡಿಂದುವಾಡಿ ಗ್ರಾ.ಪಂ. ಅಧ್ಯಕ್ಷ ಶಿವರುದ್ರ, ಚಿಕ್ಕಲ್ಲೂರು ಗ್ರಾ.ಪಂ. ಅಧ್ಯಕ್ಷೆ ಗೀತಾ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ಹಾಲಿ ಸದಸ್ಯ ಉದ್ದನೂರು ಪ್ರಸಾದ್, ಹನೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಬೇಗ್ ಉಪಾಧ್ಯಕ್ಷ ಆನಂದ್ ಮುಖಂಡರಾದ ಡಾ. ದತ್ತೇಶ್ ಕುಮಾರ್, ಬಂಡಳ್ಳಿ ಜೆಸ್ಸಿಂ ಪಾಷ, ಹನೂರು ಮಂಜೇಶ್, ವಿಜಯ್ ಕುಮಾರ್, ಗೋವಿಂದ, ವೆಂಕಟೇಶ್, ಮತ್ತಿಪುರ ಮಹಾದೇವ, ಪಾಳ್ಯ ಬಸವರಾಜು, ಗೋವಿಂದ ನಾಯಕ, ನಾಗರಾಜು, ದೊಡ್ಡಿಂದುವಾಡಿ ಸಿದ್ದರಾಜು, ಕರಿಯನಪುರ ಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಎಇಇ ಗಳಾದ ಪುರುಷೋತ್ತಮ್, ಚಿನ್ನಣ್ಣನ್, ಜೆಇ ಗಳಾದ ಸುರೇಂದ್ರ, ಮಹೇಶ್, ಗುತ್ತಿಗೆದಾರರಾದ ಲೋಕೇಶ್, ಕೃಷ್ಣ ಮತ್ತಿತರರು ಹಾಜರಿದ್ದರು.