ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ

Spread the love

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳಬೇಕೆಂದು ಪ್ರಾಯೋಜಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಕರೆ ನೀಡಿದರು.

ನಗರದ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಬುಧವಾರ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತಿದ್ದು, ತಮ್ಮ ಉತ್ಪನ್ನಗಳು, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಲಿದ್ದು,ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ ಎಂದು ಹೇಳಿದರು.

ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ತಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ, ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ ಎಂದು ಮಹದೇವಪ್ಪ ಕರೆ ನೀಡಿದರು.

ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಮಾಡಲಾಗುತ್ತಿದೆ. ಅಂದು ಬೀದರ್‌ನಿಂದ
ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಈ ಮಾನವ ಸರಪಳಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಎಂದು ಸಚಿವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ತಾವು ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ತಿಳಿಸಬಹುದಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತ ಮಾತನಾಡಿ,ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್,ಜಿಪಂ ಸಿಇಒ ಗಾಯತ್ರಿ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.