ಚಂಡೀಗಢ: ಭಾರತದ ಬಗ್ಗೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಯುಟ್ಯೂಬರ್ ಜ್ಯೋತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಹರಿಯಾಣದಲ್ಲಿ ಭಾರತದ ಬಗ್ಗೆ ಬೇಹುಗಾರಿಕೆ ನಡೆಸಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ.
ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ ಈ ಆರೋಪಿಗಳು ಪಾಕಿಸ್ತಾನಕ್ಕೆ ಮಾಹಿತಿಗಳನ್ನು ರವಾನಿಸುತ್ತಿದ್ದರು ಇವರೆಲ್ಲರೂ ಐಎಸ್ಐ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಶತ್ರುಗಳಿಗೆ ಮಾಹಿತಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೈತಾಲ್, ಪಾಣಿಪತ್, ನುಹ್ ಮತ್ತು ಹಿಸಾರ್‌ನಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಹಿಸಾರ್‌ನಿಂದ ಬಂಧಿತರಾದ
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆಕೆಯನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಜ್ಯೋತಿ ಮಲ್ಹೋತ್ರಾ ಇದೇ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳೆಂದು ಗೊತ್ತಾಗಿದೆ,ಹಾಗಾಗಿ ಪೊಲೀಸರು ಆಕೆಯ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಾರೆ.
ಇತರ ಇಬ್ಬರು ಆರೋಪಿಗಳು ಜ್ಯೋತಿಯ ಸಹಚರರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಮಸ್ತ್‌ಗಢ್ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಎಂಬ ಡಿಪ್ಲೊಮಾ ವಿದ್ಯಾರ್ಥಿಯನ್ನು ಸಹ ಬಂಧಿಸಲಾಗಿದೆ.
ಇದಕ್ಕೂ ಮೊದಲು, ಪಂಜಾಬ್‌ನಲ್ಲಿ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಅವರು ಭಾರತೀಯ ಮಿಲಿಟರಿ ನೆಲೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಐಎಸ್ಐ ಗೆ ರವಾನಿಸಿದ್ದರೆಂದು ಆರೋಪಿಸಲಾಗಿದೆ.
ಬಂಧಿತರೆಲ್ಲರೂ ಐಎಸ್ಐ ಜೊತೆ ಸಂಪರ್ಕದಲ್ಲಿದ್ದರು,ಅವರು ಭಾರತದ ರಕ್ಷಣಾ ವ್ಯವಸ್ಥೆ ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.