ಕೊಳ್ಳೇಗಾಲದಲ್ಲಿ 250 ಹಾಸಿಗೆ ಸಾಮರ್ಥ್ಯದಆಸ್ಪತ್ರೆ: ಸ್ಥಳ ಪರಿಶೀಲಿಸಿದ ಶಾಸಕರು

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇತ್ತೀಚೆಗೆ ಮ.ಮ.ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ಕೊಳ್ಳೇಗಾಲದಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಎ‌.ಆರ್. ಕೃಷ್ಣಮೂರ್ತಿ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.

ಪಟ್ಟಣದ ಹೊರವಲಯದಲ್ಲಿರುವ ರೇಷ್ಮೆ ಕಾರ್ಖಾನೆಗೆ ಸಂಬಂಧಿಸಿದ ಸೆಂಟ್ರಲ್ ಸಿಲ್ಕ್ ಪಾರಂ ಸ್ಥಳವನ್ನು ನಿನ್ನೆ ಶಾಸಕರು ಅಧಿಕಾರಗಳ ಜೊತೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಈ ವೇಳೆ ಮಾತನಾಡಿದ ಎ‌.ಆರ್. ಕೃಷ್ಣಮೂರ್ತಿ ಅವರು, ಕಳೆದ ತಿಂಗಳು ಮುಖ್ಯ ಮಂತ್ರಿಗಳು ಮ.ಮ.ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಅನೇಕ ಪ್ರಸ್ತಾವನೆಗಳು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಜಿಲ್ಲಾ ಮಂತ್ರಿಗಳಾದ ಕೆ.ವೆಂಕಟೇಶ್ ಅವರು, ಮೈಸೂರು ಉಸ್ತುವಾರಿ ಮಂತ್ರಿಗಳಾದ ಹೆಚ್. ಸಿ. ಮಹದೇವಪ್ಪ ಮತ್ತು ನಮ್ಮ ಜಿಲ್ಲೆಯ ಶಾಸಕರುಗಳನ್ನೊಳಗೊಂಡ ಸಭೆ ನಡೆಸಿ ನಮ್ಮ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏನೆಲ್ಲಾ ಪ್ರಸ್ತಾವನೆ ಗಳನ್ನು ಸಲ್ಲಿಸ ಬಹುದು ಎಂಬುದರ ಬಗ್ಗೆ ಚರ್ಚಿಸಿ ಅನೇಕ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೆವು ಎಂದು ಹೇಳಿದರು.

ಅದರಲ್ಲಿ ಮುಖ್ಯವಾಗಿ ಎಲ್ಲೆಲ್ಲಿ ಮೆಡಿಕಲ್ ಕಾಲೇಜು ಇದೆ ಆ ಜಿಲ್ಲೆಗಳಲ್ಲಿ ಹೊಸ ಮಾನದಂಡದ ಪ್ರಕಾರ ಹೆಚ್ಚುವರಿ ಜಿಲ್ಲಾಸ್ಪತ್ರೆಗಳನ್ನು ಮಂಜೂರು ಮಾಡುವುದನ್ನು ಸರ್ಕಾರ ತೀರ್ಮಾನ ಮಾಡಿತ್ತು, ಅದರನ್ವಯ ನಮ್ಮ ಜಿಲ್ಲೆಗೆ ಅದರಲ್ಲೂ ಉಪ ವಿಭಾಗ ಕೇಂದ್ರ ವಾಗಿರುವ ಕೊಳ್ಳೇಗಾಲಕ್ಕೆ ಮತ್ತೊಂದು ಜಿಲ್ಲಾಸ್ಪತ್ರೆ ಮಂಜೂರು ಮಾಡಿದೆ.

ಆ ಪ್ರಯುಕ್ತ ಸರ್ಕಾರ ಆರೋಗ್ಯ ಇಲಾಖೆ ಮುಖಾಂತರ ಇಲ್ಲಿ ಇರುವ ಆಸ್ಪತ್ರೆ ಮೇಲೆ ಬಹು ಮಹಡಿ ಕಟ್ಟಡ ಕಟ್ಟ ಬಹುದೇ, ಇನ್ನೊಂದು ಪಕ್ಷ 5 ಎಕರೆ ಜಮೀನನ್ನ ಸರ್ಕಾರದಿಂದ ಭೂಮಿ ಹಸ್ತಾಂತರ ಮಾಡುವುದಾದರೆ ಅದೂ ಕೂಡ ಸೂಕ್ತ ವಾಗುತ್ತದೆ, ಒಂದು ವಾರದೊಳಗೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿ ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದವವರು ನನಗೆ ದೂರವಾಣಿ ಕರೆ ಮಾಡಿ ಕೇಳಿ ಕೊಂಡಿದ್ದು, ನಾನು ಕೂಡ ನಮ್ಮ ತಹಶೀಲ್ದಾರ್ ಬಸವರಾಜು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಚಿದಂಬರಂ ಗುರುಪ್ರಸಾದ್ ಸೇರಿದಂತೆ ಅನೇಕ ಅಧಿಕಾರಿಗಳೊಡನೆ 2 ಕಡೆ ಸ್ಥಳ ಪರಿಶೀಲನೆ ಮಾಡಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ಐಟಿಐ ಕಾಲೇಜು ಹಾಗೂ ಆದರ್ಶ ಶಾಲೆಗೆ ಮಂಜೂರು ಮಾಡಿಕೊಡಲಾಗಿದ್ದ ರೇಷ್ಮೆ ಇಲಾಖೆ ಜಾಗದ ಬಾಜುವಿನಲ್ಲಿ ಇರುವ 13 ಎಕರೆ ಉಳಿಕೆ ಜಾಗ ರೇಷ್ಮೆ ಇಲಾಖೆಗೆ ಸೇರಿದ್ದಾಗಿದೆ ಸರ್ವೆ ಇಲಾಖೆ ಅಧಿಕಾರಿಗಳ ಪ್ರಕಾರ ಇನ್ನು 13 ಎಕರೆ ಜಾಗವಿದೆ ಅದನ್ನು ಅವಕಾಶ ಮಾಡಿಕೊಡಬಹುದು ಎಂದು ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ಹಾಗೆಯೇ ಹೊಸ ಹಂಪಾಪುರ ಮುಂಭಾಗವಿರುವ ಹಳೇ ರೇಷ್ಮೆ ಕಾರ್ಖಾನೆ ಪುರಾತನವಾದದು. ಇದು ಸಹ 10 – 12 ಎಕರೆ ಪ್ರದೇಶ ಹೊಂದಿರುವ ಜಾಗ ಆಗಿದೆ. ಈ ಜಾಗವನ್ನು ಅನುಮೋದನೆ ಮಾಡಿಕೊಳ್ಳಬೇಕು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ ವೆಂಕಟೇಶ್ ಅವರು ರೇಷ್ಮೆ ಸಚಿವರಾಗಿರುವುದರಿಂದ ಅವರೊಡನೆ ನಾನು ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸಚಿವರು ನಾಳೆ ಜಿಲ್ಲೆಗೆ ಆಗಮಿಸಲಿದ್ದಾರೆ,ಜಿಲ್ಲಾಡಳಿತ ಭವನ ದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ನಂತರ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದು ನಂತರ ಬೆಂಗಳೂರಿಗೆ ತೆರಳುವ ವೇಳೆ ಇಲ್ಲಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ ಈ ವೇಳೆ ಅವರು ಜಾಗ ನೀಡಲು ಒಪ್ಪಿಗೆ ನೀಡುವ ಅಶಾಭಾವನೆ ಹೊಂದಿದ್ದೇನೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಇದು 250 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ, ಈಗಾಗಲೇ ಯಳಂದೂರಿಗೆ ನೂರು ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಮಂಜೂರು ಮಾಡಿ ಅವರೇ ಶಂಕು ಸ್ಥಾಪನೆ ಮಾಡಿ ಕಾಮಗಾರಿ ನಡೆಯುತ್ತಿದೆ ಇದು ಕೂಡ ಆದರೆ ನಮ್ಮ ಭಾಗದ ಎಲ್ಲಾ ಬಡ ಜನರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿದರು.

ಈ‌ಆಸ್ಪತ್ರೆ ಆದರೆ ಮೈಸೂರು ಬೆಂಗಳೂರು ಅಲೆಯುವುದು ತಪ್ಪುತ್ತದೆ.ಇಲ್ಲೇ ಉತ್ತಮ ವೈದ್ಯರುಗಳನ್ನು ನೇಮಕ ಮಾಡಿಸಿ ಸೇವೆ ಒದಗಿಸಲಾಗುವುದು. ಅದಕ್ಕಾಗಿ ಇಂದು ಜಾಗಪಡಿಶೀಲನೆ ಮಾಡಿ ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಒಪ್ಪಿಗೆ ಪಡೆದು ಹೊಸ ಆಸ್ಪತ್ರೆಗೆ ಚಾಲನೆ ಕೊಡುವ ಕೆಲಸಕ್ಕೆ ಸ್ಥಳೀಯ ಶಾಸಕನಾಗಿ ನಾನು ವಿನಯಪೂರ್ವಕವಾಗಿ ಮನವಿ ಮಾಡಿದ್ದೆ. ಅದಕ್ಕೆ ಸರ್ಕಾರ, ಜಿಲ್ಲಾಡಳಿತ, ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು, ಜಿಲ್ಲಾ ಮಂತ್ರಿಗಳು ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. ಅವರಿಗೆ ಜನತೆಯ ಪರವಾಗಿ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ‌ಹೇಳಿದರು.

ಈ ಸಂಧರ್ಭದಲ್ಲಿ ತಹಶಿಲ್ದಾರ್ ಬಸವರಾಜು, ಡಿ.ಹೆಚ್.ಒ ಚಿದಂಬರಂ, ರೇಷ್ಮೆ ಇಲಾಖೆ ಡಿಡಿ ರಾಚಪ್ಪಾಜಿ, ಸರ್ವೆ ಇಲಾಖೆಯ ಅಧಿಕಾರಿಗಳು, ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ. ಶಂಕರ್ ಮತ್ತಿತರರು ಹಾಜರಿದ್ದರು. ‌