ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ಅಧ್ಯಕ್ಷ,ಉಪಾಧ್ಯಕ್ಷರಾದ ರಮೇಶ್,ಶೇಖರ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮದುವನಹಳ್ಳಿಯ ಎಸ್.ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಮುಳ್ಳೂರಿನ ಎಂ.ಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಉಮಾಶಂಕರ್ ಕಲ್ಯಾಣ ಮಂಟಪದ ಎದುರುಗಡೆ ಇರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಎಸ್ ರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ ಶೇಖರ್ ಹೊರತುಪಡಿಸಿ ಮತ್ಯಾರು ಅರ್ಜಿ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕರು ಹಾಗೂ ಚುನಾವಣಾ ಅಧಿಕಾರಿ ಎಸ್. ನಾಗೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಸ್. ರಮೇಶ್ ಅವರು ನಾನು ಇಲ್ಲಿಗೆ 25 ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ನಾನು ಆಯ್ಕೆಯಾಗಲು ತಿಮ್ಮರಾಜಿಪುರ ಪುಟ್ಟಣ್ಣ, ಬಸವರಾಜು, ನರಸಿಂಹನ್ ಹಾಗೂ ಷಣ್ಮುಖಪ್ಪ ಅವರು ಪ್ರಮುಖ ಕಾರಣರಾಗಿದ್ದಾರೆ ಮುಖ್ಯವಾಗಿ ಮಾಜಿ ಶಾಸಕ ಆರ್.ನರೇಂದ್ರ ರವರು ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಎರಡನೇ ಬಾರಿ ನಿರ್ದೇಶಕನಾಗಿ ಆಯ್ಕೆಯಾಗಿರುವ ನಾನು ಪ್ರಥಮ ಬಾರಿಗೆ ಅಧ್ಯಕ್ಷನಾಗಿದ್ದೇನೆ. ಕಳೆದ ಬಾರಿಯೇ ನಾನು ಅಧ್ಯಕ್ಷನಾಗಿ ಆಯ್ಕೆ ಆಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅಧ್ಯಕ್ಷ ಸ್ಥಾನ ಕೈ ತಪ್ಪಿತು ಎಂದು ಹೇಳಿದರು.

ಸಹಕಾರ ಬ್ಯಾಂಕ್, ರೈತರ ಬ್ಯಾಂಕ್ ಹಾಗಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬ್ಯಾಂಕಿನಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡದೆ ಸುಸ್ಥಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದ ಅವರು ಎಲ್ಲ ನಿರ್ದೇಶಕರ ಸಹಕಾರದೊಡನೆ ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟು 13 ನಿರ್ದೇಶಕರ ಪೈಕಿ ಪಿ.ಮಹಾದೇವಸ್ವಾಮಿ, ಎಸ್. ರವಿಕುಮಾರ್, ಎಂ. ಶೇಖರ್, ಎಂ.ಕೆ. ಪುಟ್ಟಸ್ವಾಮಿ, ಎಸ್.ರಮೇಶ್, ಸಿ.ಬಸವರಾಜು, ಲೋಕೇಶ್, ಎಸ್ ಅನ್ನಪೂರ್ಣ ಸೇರಿದಂತೆ 9 ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಎಂ.ಪಿ.ಇಂದ್ರೇಶ್ ಎಸ್.ರಾಜಶೇಖರ್ ಬಿ.ಮಂಜುನಾಥ್ ಎಂ.ಶೀಲಾ ಸೇರಿದಂತೆ ನಾಲ್ಕು ನಿರ್ದೇಶಕರು ಗೈರು ಹಾಜರಾಗಿದ್ದರು.

ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲಗಾರರ ಕ್ಷೇತ್ರದಲ್ಲಿ ಒಟ್ಟು ಒಟ್ಟು 1605 ಮತದಾರರಿದ್ದು ಸಾಲಗಾರರಲ್ಲದ ಕ್ಷೇತ್ರದಲ್ಲಿ 392 ಮತದಾರರನ್ನು ಹೊಂದಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮ ಹಾಗೂ ಸಂಘದ ಬೈಲದ ಪ್ರಕಾರ ಆಡಳಿತ ಮಂಡಳಿಯು13 ನಿರ್ದೇಶಕರ ಸ್ಥಾನಗಳನ್ನು ಹೊಂದಿದ್ದು. ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳು ಒಟ್ಟು 12, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ. ಈಗಾಗಲೇ ಸಾಲಗಾರರ ಕ್ಷೇತ್ರದ 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಹಾಗಾಗಿ ಸಾಲಗಾರರ ಕ್ಷೇತ್ರದ 9 ನಿರ್ದೇಶಕರುಗಳ ಸ್ಥಾನಗಳಿಗೆ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಒಟ್ಟು 10 ಸ್ಥಾನಗಳಿಗೆ ಏಪ್ರಿಲ್ 28 ರಂದು ಚುನಾವಣೆ ನಡೆದಿತ್ತು.