ಬೆಂಗಳೂರು: ಜಾನಪದಕ್ಕೆ ಯುವಜನರು ಆಕರ್ಷಿತ ರವಾಗುವಂತೆ ಸರ್ಕಾರಗಳು ಮಾಡಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಬಾಲಾಜಿ ಅಗ್ರಹಿಸಿದರು.
ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ಜಾನಪದ ಯುವ ಬ್ರಿಗೇಡ್ ಬೆಂಗಳೂರು ನಗರ ಜಿಲ್ಲೆ ಘಟಕ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜಾನಪದ ಯುವ ಬ್ರಿಗೇಡ್ ಐದನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರದರ್ಶನ ಕಲೆಗಳು ಹಾಗೂ ಮೌಖಿಕ ಪರಂಪರೆ ಗೀತೆಗಳನ್ನು ತರಬೇತಿಯ ಮೂಲಕ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೆಲಸ ಶಿಕ್ಷಣ ಇಲಾಖೆಯ ವತಿಯಿಂದ ಆಗಬೇಕಾಗಿದೆ ಎಂದು ಹೇಳಿದರು.
ಜನಪದ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವುದು ಅಗತ್ಯತವಾಗಿದೆ, ಯುವಜನರು ಜಾನಪದದಲ್ಲಿರುವ ಅಂತರಾಳದ ಸತ್ವವನ್ನು ಅವಲೋಕಿಸಬೇಕೆಂದು ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ ಪ್ರಾಂಶುಪಾಲರಾದ ಡಾ. ಶುಭ ಮಾತನಾಡಿ ವಿಜಯನಗರ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಹಾಗೂ ಈ ಬಗ್ಗೆ ನಿರಂತರ ಕಾರ್ಯಕ್ರಮಗಳು ನಡೆಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರ. ನರಸಿಂಹಮೂರ್ತಿ ಮಾತನಾಡಿ ರಾಜ್ಯಮಟ್ಟದ ಸಮ್ಮೇಳನವನ್ನು ಜೂನ್ ತಿಂಗಳ ಏರ್ಪಡಿಸಲಾಗುತ್ತಿದ್ದು ಇದರಲ್ಲಿ ವಿದ್ಯಾರ್ಥಿಗಳು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಉಮೇಶ್ ಚಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ವಿಜಯನಗರದ ಜಾನಪದ ಘಟಕದ ವತಿಯಿಂದ ಜಾನಪದ ಉತ್ಸವವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಎನ್ ಎಸ್ ಎಸ್ ಸ್ವಯಂಸೇವಕರಿಂದ ಕಂಸಾಳೆ ನೃತ್ಯ, ಗೊರವರ ಕುಣಿತ, ಡೊಳ್ಳು ಕುಣಿತ, ಜನಪದ ಗೀತೆಗಳ ಪ್ರದರ್ಶನ
ನೀಡಲಾಯಿತು.

ಕಂಸಾಳೆ ಧನುಷ್, ಮಂಜುನಾಥ್, ಹರ್ಷಿತ್, ಮಧು ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಜಾನಪದ ಪರಿಷತ್ ರಾಮನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ, ಬೆಂಗಳೂರು ಕೇಂದ್ರ ಜಿಲ್ಲೆ ಕಾರ್ಯದರ್ಶಿ ಡಾ. ಡಿ ರತ್ನಕುಮಾರಿ, ಜಾನಪದ ಯುವ ಬ್ರಿಗೇಡ್ ಬೆಂಗಳೂರು ಕೇಂದ್ರ ಜಿಲ್ಲೆ ಸಂಚಾಲಕ ರಘು ರೋಹಿತ್ ಗೌಡ, ವಿಜಯನಗರ ಕಾಲೇಜು ಜಾನಪದ ಯುವ ಬ್ರಿಗೇಡ್ ಸಂಚಾಲಕ ಯಶವಂತ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.
