ಜಮ್ಮು-ಕಾಶ್ಮೀರ,ಮೇ.3:
ಆದಿ ಗುರು ಶಂಕರಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಕಾಶ್ಮೀರದ ಶ್ರೀನಗರದ ಶಂಕರಾಚಾರ್ಯ ಬೆಟ್ಟದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ವೇದಘೋಷ ಹಾಗೂ ಸೈನಿಕರ ಆಯಸ್ಸು ವೃದ್ಧಿಗಾಗಿ ಮೃತ್ಯುಂಜಯ ಜಪ, ಈಗಿರುವ ಕಾಶ್ಮೀರದ ಸನ್ನಿವೇಶದಲ್ಲಿ ಸ್ಥಿರತೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಮೂಲ ಶಾರದಾ ಪೀಠವನ್ನು ಹಿಂಪಡೆಯುವುದಕ್ಕಾಗಿ ಪ್ರಾರ್ಥನೆ ಮಾಡಲಾಯಿತು.

ಈ ಬೆಟ್ಟದಲ್ಲಿ ಆದಿಗುರು ಶಂಕರಾಚಾರ್ಯರು ಧ್ಯಾನ ದಲ್ಲಿ ನಿರತರಾಗಿದ್ದರು,ಹಾಗಾಗಿ ಅಲ್ಲಿಯೇ ಜಯಂತಿ ಆಚರಿಸಲಾಯಿತು.
ರುದ್ರಾಭಿಷೇಕವನ್ನು ಬೆಳಗ್ಗಿನ ಜಾವ ನಾಲ್ಕು ಗಂಟೆಯಲ್ಲಿ ನೆರವೇರಿಸಲಾಯಿತು. ಟೀಮ್ ಒನ್ ಇಂಡಿಯಾ ಸ್ಟ್ರಾಂಗ್ ಇಂಡಿಯಾ ಮೈಸೂರು ಹಾಗೂ ಬೆಂಗಳೂರು ವತಿಯಿಂದ 13 ಸ್ವಯಂಸೇವಕರು ಪಾಲ್ಗೊಂಡಿದ್ದರು.

ಸ್ವಯಂಸೇವಕರು ಸತತವಾಗಿ 12ನೆಯ ವರ್ಷ ಶಂಕರ ಜಯಂತಿಯಂದು ಕಾಶ್ಮೀರಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದಾರೆ.
ಸ್ವಯಂಸೇವಕರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾಧು ಸಂತರು ಸುಂದರಬನಿ ಆಶ್ರಮದಿಂದ ಭಾಗವಹಿಸಿದರು. ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಸುಂದರ ಬನ್ನಿಯಿಂದ ಹಾಗೂ ಮಹಾಮಂಡಲೇಶ್ವರ ಶ್ರೀ ಅಕ್ಷಗಣಾನಂದ ಜಿ ಜಮ್ಮುವಿನಿಂದ ಸತ್ಸಂಗವನ್ನು ನಡೆಸಿದರು.
ಸಿ ಆರ್ ಪಿಎಫ್, ಆರ್ಮಿ ಹಾಗೂ ಜಿಲ್ಲಾ ಆಡಳಿತ ಸಿಬ್ಬಂದಿಯವರು ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದರು. ಹಲವಾರು ವಿಐಪಿ ಗಳು ಹೋಮದಲ್ಲಿ ಪಾಲ್ಗೊಂಡರು.
ಡಾ. ನಾಗಲಕ್ಷ್ಮಿ ನಾಗರಾಜನ್, ಮೈಸೂರಿನ ನೃತ್ಯ ಕಲಾವಿದರು ದಿಗ್ವಿಜಯ ಚಮತ್ಕಾರಃ ಹಾಗೂ ಶ್ರೀ ಶಾರದಾ ಪೀಠಾರೋಹರೋಹಣಂ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.

ಶ್ರೀ ವಿದ್ಯಾರಣ್ಯ ಮಹರ್ಷಿಗಳು ಬರೆದಿರುವ ಕಾವ್ಯ ಶ್ರೀಮದ್ ಶಂಕರ ದಿಗ್ವಿಜಯಃ ಆಧಾರಿತ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆಯ ಪ್ರಸ್ತುತಿ ಇದಾಗಿದ್ದುದು ವಿಶೇಷ.
