ಮೈಸೂರು: ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಭವನಗಳು ಬುದ್ದನ ಕೇಂದ್ರಗಳಾಗಿ ಧಮ್ಮ ದೀಕ್ಷೆ, ಅಂಬೇಡ್ಕರ್ ಸ್ಮರಣೆ ಮಾಡುವ ಕೆಲಸ ಆಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕು ಚುಂಚರಾಯನಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮ ಜಯಂತಿ,ಸಮುದಾಯ ಭವನ ಹಾಗೂ ಸಾವಿತ್ರಿ ಬಾಯಿಪುಲೆ ಜ್ಞಾನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಜಯಂತಿಯನ್ನು ಭಾರತ ಸೇರಿದಂತೆ ಪ್ರಪಂಚಾದ್ಯಂತ ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದ ನಂತರ ಸಮಾಜದಲ್ಲಿ ಬದಲಾವಣೆ,ಪರಿವರ್ತನೆಯಾಗುತ್ತಿದೆ. ಅಂಬೇಡ್ಕರ್ ಕಂಡ ಹೋರಾಟದ ಕನಸು ನನಸಾಗುವ ದಿನಗಳು ಬರುತ್ತಿರುವ ಕುರಿತು ವಿಶ್ವಾಸ ಮೂಡಿದೆ ಎಂದು ಹೇಳಿದರು
ಐಶ್ವರ್ಯ,ಸಂಪತ್ತು ಇದ್ದರೂ ಸಾಮಾಜಿಕ ಸಮಾನತೆ ಇಲ್ಲದಿದ್ದರೆ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ ಶಿಕ್ಷಣದಿಂದ ಸಮಾನತೆ ದೊರೆಯುವ ನಂಬಿಕೆ ಹೊಂದಿದ್ದರು. ಶಿಕ್ಷಣದಿಂದ ಜ್ಞಾನವಂತರು,ಮೇಧಾವಿಗಳು, ರಾಜಕಾರಣಿಗಳು,ಅಧಿಕಾರಿಗಳು,ಉದ್ಯೋಗಸ್ಥರಾಗಬಹುದೆಂದು ಹೇಳಿದ್ದರು.ಅದಕ್ಕಾಗಿಯೇ ನೂರು ವರ್ಷಗಳ ಹಿಂದೆ ಬೆಳಗಾವಿಯ ನಿಪ್ಪಾಣಿಯಲ್ಲಿ ರಮಾಬಾಯಿ ಅವರೊಂದಿಗೆ ಆಗಮಿಸಿ ಶಾಲೆಯನ್ನು ಉದ್ಘಾಟನೆ ಮಾಡಿರುವ ಕುರುಹು ಇಂದಿಗೂ ಇದೆ ಎಂದು ತಿಳಿಸಿದರು.
ಸಮುದಾಯಭವನಗಳ ಜತೆಗೆ ಲೈಬ್ರರಿಗಳನ್ನು ತೆರೆಯಬೇಕು.ಜ್ಞಾನಭಂಡಾರಗಳಾದರೆ ಉತ್ತಮವಾಗಲಿದೆ. ಒಡ್ಡೋಲಗ,ಆರ್ಕೆಸ್ಟ್ರಾ ಮೊದಲಾದ ಕಾರ್ಯಕ್ರಮ,ಹಾರ-ತುರಾಯಿ ಇಲ್ಲದೆ ಮಕ್ಕಳಿಗೆ ಪುಸ್ತಕಗಳನ್ನು ಹಂಚುವ ಮೂಲಕ ಅಂಬೇಡ್ಕರ್ ಜಯಂತಿ
ಆಚರಿಸಬೇಕು.ಇದರಿಂದ ಮಕ್ಕಳ ಜ್ಞಾನಾರ್ಜನೆಗೆ ನೆರವಾಗಲಿದೆ ಎಂದು ಜಿಟಿಡಿ ತಿಳಿಹೇಳಿದರು.
ಅಂಬೇಡ್ಕರ್ ಬರೀ ಸಂವಿಧಾನ ತಜ್ಞರಲ್ಲ. ಶಿಕ್ಷಣ,ಕಾರ್ಮಿಕ,ನ್ಯಾಯ,ಕೃಷಿ,ಆರ್ಥಿಕ,ಮಹಿಳಾ ತಜ್ಞರಾಗಿದ್ದರು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸಮಗ್ರವಾಗಿ ಅಧ್ಯಯನ ನಡೆಸಿ ಸಂವಿಧಾನದ ಪುಸ್ತಕದಲ್ಲಿ ಅಡಕ ಮಾಡಿದ್ದರು
ದುರ್ಬಲರು,ಶೋಷಿತರು,ಮಹಿಳೆಯರಿಗೆ ಧ್ವನಿ ಸಿಗಲು ಕಾರಣರಾದರು ಎಂದು ಬಣ್ಣಿಸಿದರು.
ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವಾಗ ಎಲ್ಲೋ ಒಂದು ಕಡೆ ತಂದು ಇಡುತ್ತಾರೆ.ಏನಾದರೂ ವ್ಯತ್ಯಾಸವಾದ ಮೇಲೆ ತೊಂದರೆಯಾಗಲಿದೆ. ಎಲ್ಲಾ ಸಮಾಜದಲ್ಲಿ ಕಿಡಿಗೇಡಿಗಳು ಇರುತ್ತಾರೆ. ಹಾಗಾಗಿ,ನಾವು ಪುತ್ಥಳಿ ಇಡುವಾಗ ಉತ್ತಮ ಜಾಗದಲ್ಲಿ ಇಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರದ ಬಗ್ಗೆ ಮಾತನಾಡಿದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕೆಲವರು ನನ್ನ ವಿರುದ್ಧ ಪ್ರತಿಭಟನೆ ಮಾಡಿದರು.ನಾನೇನು ಮಾತನಾಡಿದೆ ಎಂಬುದನ್ನು ನೇರವಾಗಿ ಬಂದು ಕೇಳಿದ್ದರೆ ಹೇಳುತ್ತಿದ್ದೆ. ಆದರೆ, ಕೆಲವರು ವಿರೋಧಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸೊಸೈಟಿ ಕಾರ್ಯದರ್ಶಿಯಾಗಿದ್ದಾಗ ಚೆಲುವಯ್ಯನನ್ನು ನಿರ್ದೇಶಕನನ್ನಾಗಿ ಮಾಡಿದ್ದೆ.ರಟ್ನಹಳ್ಳಿಯ ದಲಿತ ಸಮುದಾಯದ ಮನೆಯ ಜಗುಲಿಯಲ್ಲಿ ಮಲಗಿ ಎಲ್ಲರಿಗೂ ಸಾಗುವಳಿ ಕೊಡುವಂತೆ ಮಾಡಿದ್ದೆ.ನಾನು ಬರೀ ಭಾಷಣ ಬಿಗಿದು ಹೋಗುವವನಲ್ಲ. ನಾನೇನು ಮಾಡಿದ್ದೇನೆಂದು ಕ್ಷೇತ್ರದ ಜನರಿಗೆ ಮೊದಲಿನಿಂದಲೂ ಗೊತ್ತಿದೆ ಎಂದು ನುಡಿದರು.
ಮೈಸೂರು ತಾಲ್ಲೂಕಿನಲ್ಲಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಇದೇ ರೀತಿ ಮಾರಿಕೊಂಡರೆ ಮುಂದೆ ಕಷ್ಟವಾಗಲಿದೆ. ಕೃಷಿಗೆ ಜಮೀನು ಇಲ್ಲ,ಉದ್ಯೋಗ ಇಲ್ಲ, ದುಡಿಮೆ ಗೊತ್ತಿಲ್ಲ. ಮುಂದಿನ ಹತ್ತಾರು ವರ್ಷಗಳಲ್ಲಿ ಬದುಕು ಕಷ್ಟಕರವಾಗಲಿದೆ ಎನ್ನುವ ಯೋಚನೆಯನ್ನೇ ಮಾಡಿಲ್ಲ ಎಂದು ಬೇಸರ ಪಟ್ಟರು.
ಅದ್ಧೂರಿ ಮದುವೆಗಳು ಶುರುವಾಗಿದೆ. ಮದುವೆ ದುಡ್ಡನ್ನು ಇಟ್ಟುಕೊಂಡು ಮಗಳ ನೆರವಿಗೆ ಕೊಡಬಹುದು ಎಂದು ಕಿವಿಮಾತು ಹೇಳಿದರು.
ಉದ್ಯಮಿ ಬೆಳವಾಡಿ ಶಿವಕುಮಾರ್,ಜಿಪಂ ಮಾಜಿ ಸದಸ್ಯರಾದ ರೂಪಾ ಲೋಕೇಶ್,ತಾಪಂ ಮಾಜಿ ಸದಸ್ಯ ಸುರೇಶ್ ಕುಮಾರ್,ಚಿಕ್ಕೀರಯ್ಯ, ಮುಖಂಡರಾದ ಡಾ.ಮೂರ್ತಿ, ರವಿ,ರಘು,ಲೋಕೇಶ್,
ಶಿವಕುಮಾರ್,ಸುರೇಶ್,ಮಹದೇವಯ್ಯ, ವೆಂಕಟರಮಣ, ಚಿಕ್ಕವೀರಯ್ಯ,
ಸಿದ್ದಯ್ಯ,ಬಸವಣ್ಣ,ನಂಜುಂಡ ಮತ್ತಿತರರು ಹಾಜರಿದ್ದರು.