ಅನಧಿಕೃತ ಫ್ಲೆಕ್ಸ್ ಬ್ಯಾನರ್; ಬೆಂಗಳೂರಿನ ಶಾಸಕರ ವಿರುದ್ಧ ಕ್ರಮಕ್ಕೆ ಆಪ್ ಆಗ್ರಹ

Spread the love

ಬೆಂಗಳೂರು: ಬೆಂಗಳೂರಿನ ಶಾಸಕರು ಪದೇ,ಪದೇ ಫ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸಿ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

ಅಲ್ಲದೆ ಈ ಫ್ಲೆಕ್ಸ್,ಬ್ಯಾನರ್ ಗಳು ಬಿದ್ದು ನಾಗರೀಕರಿಗೆ ಗಾಯಗಳಾಗಿರುವ ಉದಾಹರಣೆಗಳಿವೆ,ಹೀಗೆ ಅನಧಿಕೃತವಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್,ಬ್ಯಾನರುಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ನಿಯೋಗ ಬಿಬಿಎಂಪಿಯ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿತು.

ಈ ವೇಳೆ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಜಾಹೀರಾತು ನೀತಿಯ ಅನುಸಾರ ಇದುವರೆಗೂ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ನೂರಾರು ಕೋಟಿ ರೂಪಾಯಿಗಳ ದಂಡವನ್ನು ವಸೂಲಿ ಮಾಡಬಹುದಾಗಿತ್ತು. ಬೆಂಗಳೂರಿನ ಸೌಂದರ್ಯವನ್ನು ಸಹ ಕಾಪಾಡಬಹುದಾಗಿತ್ತು,ಆದರೆ ಯಾವುದೇ ಕಠಿಣ ಕ್ರಮಗಳನ್ನು ಬಿಬಿಎಂಪಿ ಇಂಜಿನಿಯರ್ ಗಳು ತೆಗೆದುಕೊಂಡಿಲ್ಲ ಇದರಿಂದಾಗಿ ಮಹಾನಗರ ಪಾಲಿಕೆಗೆ ನೂರಾರು ಕೋಟಿ ರೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಇದೀಗ ನೂತನ ಪರಿಷ್ಕೃತ ಮಾರ್ಗಸೂಚಿಯನ್ನು ರಚಿಸಿ ಈ ಅನಧಿಕೃತ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಆದರೆ ನಿನ್ನೆಯವರೆಗೂ ಜನ್ಮ ದಿವಸಗಳ ನೆಪದಲ್ಲಿ ಬೆಂಗಳೂರಿನಲ್ಲಿ ಹಾಕಿರುವ ಫ್ಲೆಕ್ಸ್ ಬ್ಯಾನರ್ ಗಳಿಗೆ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಂಡಿಲ್ಲ, ದಂಡವನ್ನೂ ವಸೂಲಿ ಮಾಡಿಲ್ಲ. ಈ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸುವ ಮೂಲಕ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಸೌಂದರ್ಯಕ್ಕೆ ಪದೇಪದೇ ಧಕ್ಕೆ ತರುತ್ತಿರುವ ಬೆಂಗಳೂರಿನ ಶಾಸಕರುಗಳ ವಿರುದ್ಧ ಈ ಮೂಲಕ ಕಠಿಣ ಕ್ರಮಗಳನ್ನು ತೆಗೆದುಕೊಂಡಲ್ಲಿ ಆ ಶಾಸಕರುಗಳು ಹಾಗೂ ಅವರ ಹಿಂಬಾಲಕರುಗಳಿಗೆ ಕಾನೂನಿನ ಅರಿವು ಸ್ವಲ್ಪಮಟ್ಟಿಗಾದರೂ ಆಗುತ್ತದೆ ಎಂದು ಜಗದೀಶ್ ಚಂದ್ರ ಆಗ್ರಹ ಪಡಿಸಿದರು.

ಪಕ್ಷದ ನಿಯೋಗದಲ್ಲಿ ಮುಖಂಡರುಗಳಾದ ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ಶಿವಕುಮಾರ್, ಮೋಹನ್ ರಾಜು, ಅಣ್ಣ ನಾಯಕ್ ಮತ್ತಿತರರು ಹಾಜರಿದ್ದರು.