ಶುದ್ಧ ಆಹಾರ,ಶುಚಿತ್ವ ಕಾಪಾಡಲು ಹೋಟೆಲ್ ಮಾಲೀಕರಿಗೆ ಸೂಚನೆ

Spread the love

ಮೈಸೂರು: ಬಿರು ಬೇಸಿಗೆ ಹಿನ್ನೆಲೆಯಲ್ಲಿ ನಾನಾ ಕಾಯಿಲೆಗಳು ಕಾಡುವುದರಿಂದ ಗ್ರಾಹಕರಿಗೆ ಶುದ್ಧವಾದ ಆಹಾರ ನೀಡಬೇಕು ಮತ್ತು ಶುಚಿತ್ವ ಕಾಪಾಡಬೇಕೆಂದು ಹೋಟೆಲುಗಳವರಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೀಪಾ ಹೆಚ್. ಆರ್ ಆದೇಶಿಸಿದ್ದಾರೆ.

ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಟೇಲ್ ಮತ್ತು ಬೇಕರಿಗಳಿಗೆ ಪಂಚಾಯಿತಿ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿದ ದೀಪಾ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯಕರವಾದ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವಂತೆ ಮತ್ತು ಶುಚಿತ್ವ ಕಾಪಾಡುವಂತೆ ಬೇಕರಿ ಮಾಲೀಕರುಗಳಿಗೆ ಸೂಚನೆ ನೀಡಿದರು.

ಈ‌ವೇಳೆ ಹೋಟೆಲುಗಳು ಮತ್ತು ಬೇಕರಿಯೊಳಗೆ ತೆರಳಿ ಶುಚಿತ್ವ ಕಾಪಾಡಲಾಗಿದೆಯೆ ಎಂಬುದನ್ನು ದೀಪಾ ಮತ್ತು ಅಧಿಕಾರಿಗಳು ಪರಿಶೀಲಿಸಿದರು.

ಜನತೆ ಕೂಡಾ ಶುದ್ಧ ವಾದ ಆಹಾರವನ್ನೇ ಸೇವಿಸಬೇಕು ದೇಹದ ಶುಚಿತ್ವ ಹಾಗೂ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೀಪಾ ಹೆಚ್, ಆರ್ ಅವರಿಗೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸೂಪರ್ವೈಸರ್ ಆನಂದ್ ಹಾಗೂ ಸಿಬ್ಬಂದಿಗಳು ಸಾಥ್ ನೀಡಿದರು.