ಮೈಸೂರು: ಪ್ರತಿಯೊಬ್ಬರೂ ಸ್ವತಂತ್ರವಾಗಿ ಜೀವಿಸುತ್ತಿರುವುದಕ್ಕೆ ಕಾರಣ ನಮ್ಮ ಸಂವಿಧಾನ ಎಂದು ಚಾಮರಾಜ ವಿಧಾನ ಸಭೆಯ ಶಾಸಕರಾದ ಕೆ. ಹರೀಶ್ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಶಿಷ್ಟ ಸಂವಿಧಾನವನ್ನು ನಮಗೆ ಕೊಟ್ಟವರು ಡಾ. ಬಿ. ಆರ್ ಅಂಬೇಡ್ಕರ್ ಅವರು. ಸಂವಿಧಾನ ಒಂದೇ ಅಲ್ಲದೇ ಅರ್ಥಶಾಸ್ತ್ರದಲ್ಲೂ ಸಹ ಪ್ರಸಿದ್ಧವಾದ ಮಹಾನ್ ವ್ಯಕ್ತಿ ಯಾಗಿದ್ದರು. ಜೊತೆಗೆ ಎಲ್ಲಾ ವಿಚಾರದಲ್ಲಿಯೂ ಪರಿಣಿತಿ ಹೊಂದಿದ್ದರು. ಅಂತಹ ಮಹಾನ್ ವ್ಯಕ್ತಿ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನವನ್ನು ಅಳವಡಿಸಿಕೊಂಡ ಮೇಲೆ ನಾವು ಅದನ್ನು ಅರ್ಥ ಮಾಡಿಕೊಂಡು ಭೀಮ ಪರ್ವವಾಗಿ ಮಾಡಬೇಕು ಎಂದು ಹೇಳಿದರು.
ದಿನರು, ಹಿಂದುಳಿದವರಿಗೆ ಅಸ್ಪೃಶ್ಯರಿಗೆ ದೇಶದಲ್ಲಿ ಸಮಾನತೆ, ಸಹಬಾಳ್ವೆಯಿಂದ ಬದುಕಲು ಸಂವಿಧಾನವನ್ನು ಕೊಟ್ಟಿದ್ದಾರೆ ಅದನ್ನು ಯಾರೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಶಾಸಕರಾದ ಜಿ. ಟಿ. ದೇವೇಗೌಡ ಅವರು ಮಾತನಾಡಿ ಸಂವಿಧಾನದ ಮೂಲಕ ಎಲ್ಲರ ಕಣ್ಣನ್ನು ತೆರೆಸಿದವರು ಡಾ. ಬಿ. ಆರ್ ಅಂಬೇಡ್ಕರ್ ಎಂದು ಬಣ್ಣಿಸಿದರು.
ಎಲ್ಲರಿಗೂ ಇರುವುದು ಒಂದೇ ಸಂವಿಧಾನ ಅದು ಬಾಬ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವಂತಹ ಸಂವಿಧಾನ
ಅದರಂತೆ ನಾವು ಅಡಳಿತ ನಡೆಸಬೇಕು ಎಂದು ತಿಳಿಸಿದರು.
ಡಾ. ಬಾಬ ಸಾಹೇಬ್ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಅವರು ಒಂದು ದೊಡ್ದ ಶಕ್ತಿ. ಶಿಕ್ಷಣ ಸಂಘಟನೆ ಅನ್ಯಾಯದ ವಿರುದ್ಧ ಹೋರಾಟ ಎಂಬ ಕರೆ ನೀಡಿದ್ದರು, ಶಿಕ್ಷಣಕ್ಕೆ ಮೊದಲ ಅಧ್ಯತೆಯನ್ನು ನೀಡಿ ಕ್ರಾಂತಿಯನ್ನು ಮಾಡಿದವರು ಅಂಬೇಡ್ಕರ್ ಅವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ ಡಿ. ತಿಮ್ಮಯ್ಯ ಅವರು ಮಾತನಾಡಿ ಕತ್ತೆಲೆಯಲ್ಲಿ ಬದುಕುತ್ತಿದ್ದಂತಹ ಜನರಿಗೆ ಬೆಳಕು ನೀಡಿ, ಚೇತನವನ್ನು ತುಂಬಿ ಶಕ್ತಿಯನ್ನು ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್ ಎಂದು ಹೇಳಿದರು.
ವಿಧಾನ ಪರಿಷತ್ ಮತ್ತೊಬ್ಬ ಸದಸ್ಯ ಸಿ.ಎನ್.ಮಂಜೇಗೌಡ ಅವರು ಮಾತನಾಡಿ ಶಿಕ್ಷಣ ಸಮಾನತೆ , ಬ್ರಾತೃತ್ವ ಎಂಬ ಮೂರು ಆಧಾರ ಸ್ತಂಭ ಗಳನ್ನು ನಮಗೆ ಡಾ. ಬಿ. ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ. ಅವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬುದ್ಧ, ಬಸವಣ್ಣ ಅಂಬೇಡ್ಕರ್ ಅವರ ಆಲೋಚನೆಗಳನ್ನು ಹಾಗೂ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನೀವು ಅವರಲ್ಲಿ ಒಬ್ಬ ಮಹಾನ್ ವ್ಯಕ್ತಿ ಯಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್,
ಮಂಡ್ಯ ಜಿಲ್ಲೆ,ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಜೆ. ಬಿ. ಮಂಜುನಾಥ್ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎನ್.ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಶಿಫ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.