ಬೋರ್ ವೆಲ್ ಪೈಪ್ ಅಳವಡಿಕೆ ವಿಚಾರದಲ್ಲಿ ಕ್ಯಾತೆ; ಮಹಿಳೆಗೆ ಹಲ್ಲೆ-ನಾಲ್ವರ ವಿರುದ್ದ ಎಫ್ಐಆರ್

ಮೈಸೂರು: ಬೋರ್ ವೆಲ್ ಅಳವಡಿಸುವ ವಿಚಾರದಲ್ಲಿ ಕ್ಯಾತೆ ತೆಗೆದ ಯುವಕ ಮಹಿಳೆ ಮೇಲೆ ಮೊಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ತೊಂಡಾಳು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮಹದೇವಮ್ಮ ಎಂಬುವರು ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದ ಚೇತನ್ ಕುಮಾರ್ ಹಾಗೂ ಆತನಿಗೆ ಸಾಥ್ ನೀಡಿದ ಚಿತ್ರ,ಮಮತ ಹಾಗೂ ಕುಮಾರ್ ಎಂಬುವರ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಂಡಾಳು ಗ್ರಾಮದ ಸರ್ವೆ ನಂ 75 ರ ಜಮೀನಿನಲ್ಲಿ ರಾಘವೇಂದ್ರ ಎಂಬುವರು ಬೋರ್ ವೆಲ್ ಹಾಕಿಸಿದ್ದು ಪೈಪ್ ಅಳವಡಿಸುವ ಕಾಮಗಾರಿ ಮಾಡುತ್ತಿದ್ದಾಗ ಚಿತ್ರ,ಮಮತ ಹಾಗೂ ಕುಮಾರ್ ಗಲಾಟೆ ಮಾಡಿ ರಾಘವೇಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ‌ ವೇಳೆ ಪತಿಯ ನೆರವಿಗೆ ಪತ್ನಿ ಮಹದೇವಮ್ಮ ಧಾವಿಸಿದ್ದಾರೆ.ಆಗ ಚೇತನ್ ಕುಮಾರ್ ಮೊಚ್ಚಿನಿಂದ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ.ಗಾಯಗೊಂಡ ಮಹದೇವಮ್ಮಾ ಅವರಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.