ಕುಡಿಯಲು ಹಣ ನೀಡದ ತಾಯಿಯ ಕೊಂದ ಮಗ

Spread the love

ಬೆಂಗಳೂರು: ಕುಡಿಯಲು ಹಣ ನೀಡದ್ದಕ್ಕೆ ಪಾಪಿ ಮಗ ಹೆತ್ತು,ಹೊತ್ತು ಸಾಕಿದ ತಾಯಿಯನ್ನೇ ಹತ್ಯೆ ಮಾಡಿದ ಅತ್ಯಂತ ಹೇಯ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಸಾಯಿಸಿದ ಮಗನನ್ನು ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುನೇಶ್ವರ ನಗರದ ಶಾಂತಾಬಾಯಿ (82)ತನ್ನದೇ ಮಗನಿಂದ ಕೊಲೆಯಾದ ದುರ್ದೈವಿ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಮಹೇಂದ್ರ ಸಿಂಗ್ (56)ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

ಚನ್ನಪಟ್ಟಣದ ಮಹೇಂದ್ರ ಸಿಂಗ್, ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಐದು ವರ್ಷಗಳಿಂದ ವಾಸವಾಗಿದ್ದ.

ಮದ್ಯ ವ್ಯಸನಿಯಾಗಿದ್ದ ಈತ ಕೆಲಸಕ್ಕೂ ಹೋಗುತ್ತಿರಲಿಲ್ಲ, ಪತ್ನಿ ಸಹ ಈತನಿಂದ ದೂರವಾಗಿದ್ದರು.ಕುಡಿಯಲು ತಾಯಿ ಬಳಿ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಾಬಾಯಿ ಅವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಒಂದು ಮನೆಯ ಬಾಡಿಗೆ ಹಣವೂ ಬರುತಿತ್ತು.ಇದರಿಂದಲೇ ಶಾಂತಾಬಾಯಿ ಜೀವನ ಸಾಗಿಸುತ್ತಿದ್ದರು.

ಮಗ ಹಣಕ್ಕಾಗಿ ತಾಯಿಗೆ ಪೀಡಿಸುತ್ತಿದ್ದ. ಇದೇ ವಿಚಾರದಲ್ಲಿ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ತಾಯಿ ಹಣ ನೀಡದ ಕಾರಣ ಮನೆಯಲ್ಲಿದ್ದ ಕಬ್ಬಿಣದ ರಾಡ್​​ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.