ಭಾರತ ತಲುಪಿದ ತಹವ್ವೂರ್ ರಾಣಾಗೆ ಭಾರೀ ಭದ್ರತೆ

Spread the love

ಮುಂಬೈ: ಅಮೆರಿಕದಿಂದ ಗಡಿಪಾರಾಗಿದ್ದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ,ಭಾರೀ ಭದ್ರತೆಯಲ್ಲಿ ಮುಂದಿನ ಪ್ರಕ್ರಿಯೆ ನಡೆಯುತ್ತಿದೆ.

ಎನ್ಐಎ,ಆರ್ ಎ ಡಬ್ಲ್ಯೂ,ಎಸ್‌ಡಬ್ಲ್ಯು‌ಎಟಿ ತಂಡಗಳು ಅಮೆರಿಕಕ್ಕೆ ತೆರಳಿ ನಿನ್ನೆ ವಿಶೇಷ ವಿಮಾನದಲ್ಲಿ ರಾಣಾ ಜೊತೆ ಭಾರತಕ್ಕೆ ಹೊರಟಿದ್ದರು. ಇಂದು ಮಧ್ಯಾಹ್ನ ಸಂಜೆ ರಾಣಾ ಇದ್ದ ವಿಮಾನ ದೆಹಲಿಯಲ್ಲಿ ಇಳಿಯಿತು.ಬಿಗಿ ಭದ್ರತೆಯಲ್ಲಿ ಮುಂದಿನ ಪ್ರಕ್ರಿಯೆಗಳು ನಡೆದಿವೆ.

ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸುವ ಸಾಧ್ಯತೆಯಿದೆ. ರಾಣಾ ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತುರ್ತು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ದೇಶದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಭಾರತದ ತನಿಖಾಧಿಕಾರಿಗಳ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿತ್ತು.

ಅಧಿಕಾರಿಗಳ ಪ್ರಕಾರ, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿರುವ ಹೈ ಸೆಕ್ಯುರಿಟಿ ಸೆಲ್‌ಗಳು ಹೆಚ್ಚಿನ ಅಪಾಯದ ಬಂಧಿತ ವ್ಯಕ್ತಿಗಾಗಿ ಸಿದ್ಧವಾಗಿವೆ.

ಎನ್‌ಐಎ ಇತ್ತೀಚೆಗೆ ರಾಣಾ ಪ್ರಕರಣವನ್ನು ಮುಂಬೈನಿಂದ ದೆಹಲಿಗೆ ವರ್ಗಾಯಿಸುವ ಬಗ್ಗೆ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಏಜೆನ್ಸಿ ಅವರನ್ನು ಕಸ್ಟಡಿಗೆ ವಿಚಾರಣೆಗೆ ಒಳಪಡಿಸಬಹುದು. ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ರಾಣಾ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ರಾಣಾನನ್ನು NIA ಔಪಚಾರಿಕವಾಗಿ ಬಂಧಿಸಿ, ನಂತರ ಪ್ರಧಾನ ಕಚೇರಿಗೆ ಕರೆದೊಯ್ಯಲಾಗುವುದು. ಅಲ್ಲಿ ಕೆಲವು ದಾಖಲೆಗಳು ಸೇರಿದಂತೆ ಔಪಚಾರಿಕ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಅವರನ್ನು 24 ಗಂಟೆಗಳ ಒಳಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಆದರೆ,ರಾಣಾನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಥವಾ ದೈಹಿಕವಾಗಿ ಹಾಜರುಪಡಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.