ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ ಭೀಮನಗರದ ಮುಖಂಡರ ಸಿದ್ಧತೆ

Spread the love

ಕೊಳ್ಳೇಗಾಲ: ಕೊಳ್ಳೇಗಾಲ ಭೀಮನಗರದ ಡಾ.ಅಂಬೇಡ್ಕರ್ ಜಯಂತೋತ್ಸವ ಆಚರಣೆ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಸಂಭ್ರಮ ಸಡಗರ ದಿಂದ ಆಚರಿಸಲು ನಿರ್ಧರಿಸಲಾಗಿದೆ.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದ ಸಭಾಂಗಣದಲ್ಲಿ ಈ ಕುರಿತು ಭೀಮನಗರದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರು ಮಾತನಾಡಿ, ಏ.11 ರಿಂದ 14 ರವರೆಗೆ ಕೊಳ್ಳಗಾಲ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗಿವೆ ಎಂದು ತಿಳಿಸಿದರು.

ಭೀಮನಗರದ ಮನೆ, ಮನೆಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಲಿದೆ. ಕಳೆದೊಂದು ವಾರದಿಂದ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಸಮುದಾಯದ ಸಾಕಷ್ಟು ಯುವಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಆಹ್ವಾನ ಪತ್ರಿಕೆಗಳನ್ನು ನೀಡಿ ಜನರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿ ಗ್ರಾಮಾಂತರ ಪ್ರದೇಶದ ಜನರೊಡಗೂಡಿ ಅಂಬೇಡ್ಕರ್ ಜಯಂತೋತ್ಸವವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದು ತಿಳಿಸಿದರು.

ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅಂಬೇಡ್ಕರ್ ಅವರು ನ್ಯಾಯವಾದಿಗಳು ಹಾಗೂ ಕಾನೂನು ಸಚಿವರಾಗಿದ್ದರಿಂದ ಏ.11 ರಂದು ಸಂಜೆ 5 ಗಂಟೆಗೆ ಭೀಮ ನಗರದ ಸಾವಿತ್ರಿಬಾಯಿ ಪುಲೆ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ, ಕಾರ್ಯಕ್ರಮಕ್ಕೆ ನ್ಯಾಯಾಧೀಶರು ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಮಾಳಿಗೆ ತಿಳಿಸಿದರು.

ಏ.12 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ರಮಾಬಾಯಿ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಈ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭೀಮನಗರದ ವೈದ್ಯರು ಹಾಗೂ ಸಿಬ್ಬಂದಿ ಬಳಗ ನಡೆಸಿಕೊಡಲಿದೆ.

ಏ.13 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6 ಗಂಟೆಗೆ ಬೆಂಗಳೂರು ರಸ್ತೆಯಲ್ಲಿರುವ ಭೀಮ ನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಖ್ಯಾತ ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರ ರಚನೆ ಮತ್ತು ನಿರ್ದೇಶನದ ಮನುಸ್ಮೃತಿ ಮತ್ತು ಭಾರತದ ಸಂವಿಧಾನ ಎಂಬ ನಾಟಕ ಪ್ರದರ್ಶನವಿದೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

14 ರಂದು ಬೆಳಿಗ್ಗೆ 6 ರಿಂದ 8 ರವರೆಗೆ ಭೀಮ ನಗರ ಹಾಗೂ ಜಿ.ಪಿ. ಮಲ್ಲಪ್ಪಪುರಂ ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.

9 ಗಂಟೆಗೆ ಭೀಮ ನಗರದ ಬಸವನಗುಡಿಯಿಂದ ಅಂಬೇಡ್ಕರ್ ಪ್ರತಿಮೆ ಮೆರವಣಿಗೆ ಹೊರಡಲಿದೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ನ್ಯಾಷನಲ್ ಶಾಲ ಮೈದಾನ ತಲುಪಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ

ಸಂಜೆ ವೇದಿಕೆ ಕಾರ್ಯಕ್ರಮಗಳು ಮುಂದುವರೆಯಲಿದ್ದು 5 ಕ್ಕೆ ರಮೇಶ್ ತಾಯೂರು ಮತ್ತು ತಂಡದಿಂದ ಭೀಮಗೀತೆಗಳ ಗಾಯನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಭೀಮನಗರದ ಕಲಾವಿದರು ಮತ್ತು ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕರಾದ ಎ ಆರ್ ಕೃಷ್ಣಮೂರ್ತಿ ಎಂ ಆರ್ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೊಳ್ಳೇಗಾಲ ಪಟ್ಟಣದ ಭೀಮನಗರ ಜಿಲ್ಲೆ ಹಾಗೂ ತಾಲ್ಲೂಕಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಮುದಾಯದ ಮುಖಂಡರು ಗಳಾದ ದಿವಂಗತರಾದ ಡಿ ಸಿದ್ದರಾಜು, ಪ್ರೆಸ್ ರಾಜಣ್ಣ ಹಾಗೂ ಹೋರಾಟಗಾರರಾದ ದಿವಂಗತ ಹೆಚ್. ಕೃಷ್ಣಸ್ವಾಮಿ, ಶಿವಲಂಕಾರಯ್ಯ, ದೊರೈರಾಜ್ ಅವರು ಸಂಘಟನೆ ಹೇಗೆ ಕಟ್ಟಬೇಕೆಂಬುದನ್ನು ತೋರಿಸಿಕೊಟ್ಟು ಇಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ದೊಡ್ಡ ಯಜಮಾನ ಚಿಕ್ಕಮಾಳಿಗೆ ಸ್ಮರಿಸಿದರು.

ಹಿರಿಯ ಮುಖಂಡರಾದ ಲಿಂಗರಾಜು ಅವರು ಮಾತನಾಡಿ ಕಾರ್ಯಕ್ರಮದ ವೇಳೆ ಯಾವುದೇ ಗೊಂದಲಕ್ಕೆ ಅಸ್ಪದ ಕೊಡದೆ ಬಹಳ ಶಾಂತಿಯುತವಾಗಿ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.

ನಟರಾಜು ಮಾಳಿಗೆ ಅವರು ಮಾತನಾಡಿ 1991ರಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿದೆವು ಮತ್ತೆ ಈ ಅವಕಾಶ ಈಗ ಸಿಕ್ಕಿದೆ ಗ್ರಾಮೀಣ ಪ್ರದೇಶದವರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಇದೇ‌ ವೇಳೆ ಸಮಾರಂಭದ ಆಹ್ವಾನ ಪತ್ರಿಕೆ,ಬ್ರೌಶರ್ ಗಳನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಭೀಮನಗರದ ಯಜಮಾನರುಗಳಾದ ವರದರಾಜು, ನಟರಾಜು, ಸಿದ್ದಾರ್ಥ, ಪಾಪಣ್ಣ, ಸನತ್ ಕುಮಾರ್, ಸಿದ್ದಪ್ಪ, ಜಯಂತೋತ್ಸವದ ಪ್ರಚಾರ ಸಮಿತಿಯ ದಿಲೀಪ್ ಸಿದ್ದಪ್ಪಾಜಿ, ಶಂಕರ್ ಚೇತನ್, ಕಿರಣ್, ಸಿದ್ದಪ್ಪಾಜಿ, ಮಾಧ್ಯಮ ಸಮಿತಿಯ ಮುಖ್ಯಸ್ಥ ನಿಂಪು ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.