ಉದ್ದು ಬಿತ್ತನೆ; ಉಚಿತ ಬಿತ್ತನೆ ಬೀಜದ ಮಿನಿ ಕಿಟ್ ವಿತರಿಸಿದ ಶಾಸಕ ಕೃಷ್ಣಮೂರ್ತಿ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರ ತೇವಾಂಶ ಭರಿತ ಜಮೀನಿನಲ್ಲಿ ಉದ್ದು ಬಿತ್ತನೆ ಮಾಡಲು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ರೈತರಿಗೆ ಉಚಿತ ಬಿತ್ತನೆ ಬೀಜದ ಮಿನಿ ಕಿಟ್ ಗಳನ್ನು ವಿತರಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿಗಳಿಗೆ 4 ಕೆ.ಜಿ ಉದ್ದಿನ ಕಾಳಿನ ಬಿತ್ತನೆ ಬೀಜದ ಮಿನಿ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರ ತೇವಾಂಶ ಭರಿತ ಜಮೀನಿನಲ್ಲಿ ಉದ್ದಿನ ಬೆಳೆ ಬೆಳೆಯಲು ಇದು ಸಕಾಲವಾಗಿದ್ದು ಜೂನ್ – ಜುಲೈಗೆ ಮುಂಗಾರು ಹಂಗಾಮು ಪ್ರಾರಂಭವಾಗುವ 90 ದಿನದೊಳಗೆ ಪೂರ್ವ ಮುಂಗಾರಿನಲ್ಲಿ ಉದ್ದಿನ ಪಸಲು ಬೆಳೆಯ ಬಹುದಾಗಿದೆ ಎಂದು ತಿಳಿಸಿದರು.

ರೈತರ ಅನುಕೂಲಕ್ಕಾಗಿ ಸರ್ಕಾರದ ಆದೇಶದಂತೆ ಕೃಷಿ ಇಲಾಖೆ ವತಿಯಿಂದ 4 ಕೆ.ಜಿ ಬಿತ್ತನೆ ಬೀಜವುಳ್ಳ 437 ಮಿನಿ ಕಿಟ್ ಗಳನ್ನು ಉಚಿತವಾಗಿ ನೀಡುತ್ತಿದ್ದು ಇಂದು 50 ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿಚಾರಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಉದ್ದು ಬೆಳೆಯುವ ರೈತರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದ ಶಾಸಕರು,ಸೂಕ್ತ ದಾಖಲಾತಿಗಳನ್ನು ಇಲಾಖೆ ಅಧಿಕಾರಿಗಳಿಗೆ ನೀಡಿ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮಾತನಾಡಿ ನಮ್ಮ ಇಲಾಖೆ ವತಿಯಿಂದ ರೈತರಿಗೆ 4 ಕೆ.ಜಿ ಬಿತ್ತನೆ ಬೀಜವುಳ್ಳ 437 ಮಿನಿ ಕಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ, ಉಳಿದ ಫಲಾನುಭವಿಗಳು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಬಹುದು ಎಂದು ಹೇಳಿದರು.

ಪ.ಜಾತಿ / ಪ.ಪಂಗಡದ ಫಲಾನುಭವಿಗಳಿಗೆ ಶೇ 75 ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು.

ಹೆಸರು ಕಾಳು ಹಾಗೂ ಉದ್ದಿನ ಕಾಳಿನ ಬೆಳೆ ಬೆಳೆಯುವ ರೈತರಿಗೆ ಜೂನ್ – ಜುಲೈ ವೇಳೆಗೆ ಮುಂಗಾರು ಹಂಗಾಮು ಪ್ರಾರಂಭವಾಗಲಿರುವುದರಿಂವ ಈ ವೇಳೆ ಭತ್ತ, ರಾಗಿ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಜುಲೈನಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಪಾರದರ್ಶಕವಾಗಿ ರೈತರಿಗೆ ಆನ್ ಲೈನ್  ಮೂಲಕ ಬಿತ್ತನೆ ಬೀಜ ವಿತರಿಸಲಿರುವುದರಿಂದ ರೈತರು ಕಡ್ಡಾಯವಾಗಿ ಪಹಣಿ ಹಾಗೂ ಆಧಾರ್ ಕಾರ್ಡ್ ತರಬೇಕು ಎಂದು ಮನವಿ ಮಾಡಿದರು.

20 ಅಧಿಕಾರಿಗಳ ಹುದ್ದೆ ಖಾಲಿ : 
ಕೊಳ್ಳೇಗಾಲ ಕೃಷಿ ಇಲಾಖೆ ವ್ಯಾಪ್ತಿಗೆ ಬರುವ ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನ 5 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟು 22 ಅಧಿಕಾರಿಗಳ ಹುದ್ದೆಗಳ ಪೈಕಿ ಇಬ್ಬರು ಅಧಿಕಾರಿಗಳು ಹೊರತುಪಡಿಸಿ ಉಳಿದ 20 ಅಧಿಕಾರಿಗಳ ಹುದ್ದೆ ಖಾಲಿ ಇವೆ.

ಹನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗೇಂದ್ರ ಹಾಗೂ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹರೀಶ್ ಮಾತ್ರ ಮಂಜೂರಾತಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 20 ಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಪ್ರಭಾರ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವವರು ಆಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಳ್ಳೇಗಾಲ ಪಟ್ಟಣದಲ್ಲಿರುವ ಕಸಬಾ ಕೇಂದ್ರದ ಕೃಷಿ ಅಧಿಕಾರಿ ಹುದ್ದೆಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಂತ್ರಿಕ ಅಧಿಕಾರಿಯಾಗಿರುವ ವಿಜಯಲಕ್ಷ್ಮಿರವರು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ.

ಹಾಗೆಯೇ ರಾಮಪುರ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ  ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಮನೋಹರ್ ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ
ಉಳಿದಂತೆ ಐದು ಹೋಬಳಿ ಕೇಂದ್ರಗಳಲ್ಲಿರುವ ಕಂಪ್ಯೂಟರ್ ಆಪರೇಟರ್ ಗಳು ಸಹ ಹೊರಗುತ್ತಿಗೆ ಆದರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮಾಹಿತಿ ನೀಡಿದರು.

ತಾಂತ್ರಿಕ ಅಧಿಕಾರಿ ವಿಜಯಲಕ್ಷ್ಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ನಗರಸಭಾಧ್ಯಕ್ಷೆ ರೇಖಾ ಮತ್ತಿತರರು ಹಾಜರಿದ್ದರು.