ಕೊಳ್ಳೇಗಾಲ: ಕನಕಪುರ – ಚಾಮರಾಜನಗರ ಮಾರ್ಗದ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸುವ ಪ್ರಕ್ರಿಯೆಗೆ ಶೀಘ್ರ ವಿಸ್ತೃತ ವರದಿ ತಯಾರಿಸಲಾಗುವುದು ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.
ಕಳೆದ ಎರಡು ದಿನಗಳಿಂದ ಪಟ್ಟಣದ ಹಳೇ ಕುರುಬರ ಬೀದಿಯಲ್ಲಿ ನಡೆಯುತ್ತಿರುವ ಶ್ರೀ ಸಿರಿಗಳ್ಳಿ ಲಕ್ಷ್ಮೀದೇವಿ ಅಮ್ಮನವರ ಕಳಸ ಸ್ಥಾಪನೆ ಹಾಗೂ ಬೋಳಕರ ಘಟಹಬ್ಬ ಮಹೋತ್ಸವಕ್ಕೆ ಅವರು ಆಗಮಿಸಿದ್ದರು.

ಈ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜ್ಯ ಹಾಗೂ ಕೇಂದ್ರ ರೈಲ್ವೆ ಸಚಿವರು ಇಬ್ಬರಲ್ಲೂ ಮನವಿ ಮಾಡಿದ್ದೇನೆ. ಈ ವೇಳೆ ಅವರು ರೈಲ್ವೆ ಯೋಜನೆಗೆ ರಾಜ್ಯದಿಂದ ಭೂಮಿ ಕೊಡಿಸುವಂತೆ ಸಲಹೆ ನೀಡಿದ್ದಾರೆ. ರೈಲ್ವೆ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳುವ ವೇಳೆ ರೈತರಿಗೆ ಪರಿಹಾರ ನೀಡಲು ಕೇಂದ್ರದ ಜೊತೆಗೆ ರಾಜ್ಯ ಸರ್ಕಾರದ ಹಣಕಾಸು ನೆರವು ಪಡೆದುಕೊಳ್ಳ ಬೇಕಾಗಿದೆ ಎಂದು ತಿಳಿಸಿದರು.
ಈ ಹಿಂದೆ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದ ಭೂಸ್ವಾಧೀನದ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಣ ನೀಡಿದ್ದವು ಅದೇ ನಿಯಮವನ್ನು ಇಲ್ಲಿಯು ಅನುಸರಿಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಅವರು ಈ ಯೋಜನೆಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ತಯಾರಿಸಿ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ನಾನು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕರೆದು ವಿಸ್ತೃತ ವರದಿ ತಯಾರಿಸುವಂತೆ ಸೂಚಿಸಿದ್ದೇನೆ ಎಂದು ಅವರು ಸುನಿಲ್ ಬೋಸ್ ತಿಳಿಸಿದರು
ಕನಕಪುರ – ಚಾಮರಾಜನಗರ ಮಾರ್ಗ ರೈಲ್ವೆ ಯೋಜನೆಗೆ ಭೂಮಿ ಮಂಜೂರು ಮಾಡಿಸು ಎಂದು ಹೇಳಿದರೆ ಸಂಸದ ಸುನಿಲ್ ಬೋಸ್ ನಾಳೆ, ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಕೊಳ್ಳೇಗಾಲದಲ್ಲಿ ಸುನಿಲ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.
ಸೋಮವಾರ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ದೇವಾಲಯ ಉದ್ಘಾಟನೆಗೆ ಭಾಗವಹಿಸಲು ಕೊಳ್ಳೇಗಾಲಕ್ಕೆ ಆಗಮಿಸಿದ್ದ ವಿ ಸೋಮಣ್ಣ ಅವರನ್ನು ರೈಲ್ವೆ ಯೋಜನೆ ಮಂಜೂರು ಮಾಡಿಸುವಂತೆ ಮನವಿ ಮಾಡಿದಾಗ ಆರ್.ಧ್ರುವನಾರಾಯಣ್ ಅವರು ಸಂಸದರಾಗಿದ್ದ ವೇಳೆ ರೈಲ್ವೆ ಯೋಜನೆ ಯನ್ನು ಒಂದು ಹಂತಕ್ಕೆ ತಂದಿದ್ದರು. ಈಗ ಆ ಕಡತ ಸಿಗದೆ ಯೋಜನೆ ಸ್ಥಗಿತವಾಗಿದೆ. ಮತ್ತೆ ನಾನು ಕೇಂದ್ರಕ್ಕೆ ಪತ್ರ ಬರೆದು ಈ ಯೋಜನೆಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಕೂಡಲೇ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮ ವಹಿಸುತ್ತೇನೆ ಎಂದು ತಿಳಿಸಿದ್ದರು.
ಈ ಕುರಿತು ಸುದ್ದಿಗಾರರು ಮಂಗಳವಾರ ಕೊಳ್ಳೇಗಾಲಕ್ಕೆ ಆಗಮಿಸಿದ್ದ ಸಂಸದ ಸುನಿಲ್ ಬೋಸ್ ರವರನ್ನು ಸುದ್ದಿಗಾರರು ಭೇಟಿ ಮಾಡಿ ಪ್ರಶ್ನಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.