ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಯುಗಾದಿ ಉತ್ಸವವು ಮೈಸೂರಿನ ಕೃಷ್ಣಮೂರ್ತಿ ಪುರಂದಲ್ಲಿರುವ ಶಾರದಾ ವಿದ್ಯಾಸಂಸ್ಥೆಯ ಮೈದಾನದಲ್ಲಿ ವಿಶೇಷವಾಗಿ ನಡೆಯಿತು.
ಸ್ವಯಂ ಸೇವಕರ ಲಯಬದ್ಧ ಲಘು ವ್ಯಾಯಾಮದಿಂದ ಶುರುವಾದ ಕಾರ್ಯಕ್ರಮವು ಸಾವಿರಾರು ಜನರ ಘೋಷದೊಂದಿಗೆ ಧ್ವಜಾರೋಹಣ, ಪ್ರಣಾಮ್ ಮುಂದುವರೆಯಿತು.

ಸಂಘದ ನೂರನೇ ವರ್ಷದ ಸಂಭ್ರಮಕ್ಕೆ ಬಿಡುಗಡೆಗೊಂಡ ಯುಗಾದಿ ವಿಶೇಷಾಂಕದ ಪರಿಚಯ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ವಿಜ್ಞಾನಿ ಪ್ರೊ. ಕೆ. ಎಸ್. ರಂಗಪ್ಪ ಅವರು ಪಾಲ್ಗೊಂಡಿದ್ದರು.
ಹೊಸ ವರುಷದ ಮೊದಲ ದಿನ, ಯುಗಾದಿ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ ಹೆಗ್ಡೆವಾರ್ ಮೊದಲ ಸರಸಂಘಚಾಲಕರು ಹುಟ್ಟಿದ ದಿನ. ಅವರ ಕುರಿತಾದ ಕೇಶವನ ಧ್ಯೇಯವಿದು ಹಾಡು ಎಲ್ಲರ ಮನಸೆಳೆಯಿತು.
ಕರ್ನಾಟಕ ದಕ್ಷಿಣ, ಸಹ ಪ್ರಾಂತ ಪ್ರಚಾರಕರಾದ ನಂದೀಶ ಅವರು ಮಾತನಾಡಿ,ಯುಗಾದಿ ಎಂದರೆ ಅವಧಿಯ ಪ್ರಾರಂಭ. ಮನುಷ್ಯ ಜೀವನವು ನಿರಂತನ ಪರಿವರ್ತನೆಯಲ್ಲಿಯೇ ನಡೆಯುತ್ತಿರುತ್ತದೆ. ನಮ್ಮ ಹಬ್ಬ ಹರಿದಿನಗಳು ಪ್ರಕೃತಿ ಜೊತೆಗೆ ಹೊಂದಿಕೊಂಡು ರೂಪುಗೊಂಡಿವೆ ಎಂದು ತಿಳಿಸಿದರು.

ಬೇವು ಬೆಲ್ಲದ ಸಮ್ಮಿಶ್ರಣದೊಂದಿಗೆ ನಳನಳಿಸುವ ಪ್ರಕೃತಿಯನ್ನು ಪೂಜಿಸುತ್ತ ನಮ್ಮ ಶರೀರವನ್ನು ಕಹಿಯಿಂದ ಶುದ್ಧೀಕರಿಸಿ ಸಿಹಿಯನ್ನು ಹಂಚುತ್ತ ಕಳೆಯುವ ದಿನಕ್ಕೆ ನಾಂದಿ ಹಾಕುವ ಯುಗಾದಿ ಹಬ್ಬ ಹಿಂದೂ ಹಬ್ಬಗಳಲ್ಲಿ ಮೊದಲನೆಯ ಹಬ್ಬ.
ಒಳ್ಳೆಯದನ್ನು ಒಳಗಿರಿಸಿಕೊಂಡು, ಬೇಡದ್ದನ್ನು ಹೊರದಬ್ಬಿ ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು ,ಹೊಸ ಚಿಗುರಿಗೆ ಭಧ್ರತೆಯ ಬುನಾದಿಯನ್ನು ಸಜ್ಜುಗೊಳಿಸುವದರೆಡೆಗೆ ಸಂಘದ ಉದ್ದೇಶವು ಸಮ್ಮಿಳಿತವಾಗಿದೆ. ಇದಕ್ಕೆ ಪೂರಕದಂತೆ ನಿರಂತರ ಪರಿವರ್ತನ ಪ್ರಕ್ರಿಯೆಯು ಹಿಂದೂ ಸಮಾಜದ ಉದಾರತೆ, ಬಿಗಿತನವನ್ನು ಹುರಿಗೊಳಿಸಿ ಇಂದಿಗೂ ಸನಾತನ ಧರ್ಮದ ತತ್ವದ ಬಿಂಬದಂತೆ ಕಂಡಿದೆ.
ಸಮಾಜವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಸಮಸ್ಯೆಯ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದರ ಕಡೆ ಯೋಚನೆಗಳನ್ನು ಮಾಡಬೇಕಾಗಿದೆ ಎಂಬ ಪಂಡಿತ್ ದೀನದಯಾಳವರ ಮಾತುಗಳನ್ನು ಅವರು ಸ್ಮರಿಸಿದರು.
ಹಿಂದೂ ರಾಷ್ಟ್ರದ ಯೋಚನೆಗಳು ಸನಾತನ ಧರ್ಮದ, ಹಿಂದುತ್ವದ ತಳಹದಿಯಲ್ಲೇ ರೂಪುಗೊಂಡಿರುತ್ತವೆ.
ಭಾರತ ಪೂರ್ವದಲ್ಲಿದೆ,ಪೂರ್ವವೆಂದರೆ ಬೆಳಕು, ಜ್ಞಾನದ ದ್ಯೋತಕ. ರಷ್ಯಾದ ಎಷ್ಟೋ ಸಮಸ್ಯೆಗಳಿಗೆ ಭಾರತದ ಎಷ್ಟೋ ನಿಲುವುಗಳು ಪರಿಹಾರವಾಗಿ ಕಂಡಿವೆ. ಯುದ್ಧದ ಸಂದರ್ಭದಲ್ಲಿ ಭಾರತದ ಮಧ್ಯಸ್ಥಿಕೆಯು ಯುದ್ಧವನ್ನು ನಿಲ್ಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ನಂದೀಶ ತಿಳಿಸಿದರು.
ಪರ್ಯಾವರಣದ ಚಿಂತನೆಯನ್ನು ಮಾಡುವಲ್ಲಿ ನಮ್ಮ ಸಮಾಜ ಹೇಗಿರಬೇಕು ಎಂಬುದನ್ನು ಉದಾಹರಣೆ ಸಹಿತ ವಿವರಣೆ ನೀಡಿದರು. ನಮ್ಮ ಪೂರ್ವಜರ ಪ್ರಕೃತಿ ಪೋಷಣೆಯು ಅದರಲ್ಲಿಯ ಬದಲಾವಣೆಗೆ ಅನುಗುಣವಾಗಿ ಹಬ್ಬ ಹರಿದಿನಗಳನ್ನು ಹುಟ್ಟಿ ಹಾಕಿದೆ. ಒಂದೊಂದು ಹಬ್ಬದಲ್ಲಿಯೂ ಈ ಎಲ್ಲ ಅಂಶಗಳನ್ನು ಕಾಣಬಹುದು.
ವ್ಯಕ್ತಿ ನಿರಪೇಕ್ಷಿತ, ಪರಿಸ್ಥಿತಿ ನಿರಪೇಕ್ಷಿತ,ಕಾಲ ನಿರಪೇಕ್ಷಿತದ ಅಡಿಯಲ್ಲಿ ಕುಡಿಯೊಡೆದ ಸಂಘವು ತನ್ನದೇ ಆದ ನಿಲುವಿನೊಂದಿಗೆ ಭಾರತ, ಹಿಂದೂ ರಾಷ್ಟ್ರದ ಚಿಂತನೆಗಳ ಮೂಲದೊಡನೆ ಸ್ಥಾಪನೆಗೊಂಡಿದೆ.
ಇಂದಿಗೂ ಜಗತ್ತಿನ ಎಲ್ಲರ ನೋಟ ಭಾರತದೆಡೆಗೆ ನೋಡುವಂತೆ ಮಾಡಿದೆ, ದೂರದೃಷ್ಟಿತ್ವದ ನಾಯಕತ್ವ, ವಿಶ್ವಕ್ಕೆ ಗುರುವಾಗಿರುವ ಚಿಂತನೆಗಳು ನಮ್ಮ ದೇಶದ ನೆಲದ ತತ್ವ ಸತ್ವಗಳು ಎಂದು ತಿಳಿಸಿದರು.

ಶಾಂತಿಯ ನೆಲೆಗೆ ಒಂದು ಮನೆಯ ಸದಸ್ಯರೆಲ್ಲರೂ ಶ್ರಮಿಸುವಾಗ ಒಂದು ದೇಶದ ಶಾಂತಿಯು ನಮ್ಮ ನಿಮ್ಮಂತಹ ಜನರ ವಿಚಾರದಲ್ಲಿ ಇರಬೇಕು.ಶ್ರೀ ರಾಮನ ಪ್ರತಿಷ್ಠಾಪನೆಯ ಸಂದರ್ಭವು ನಿರಂತರತೆಯಲ್ಲಿ ಜಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ನಮ್ಮೆಲ್ಲರ ಯೋಚನೆಯು ನಿರಂತರವಾಗಿದ್ದು ಹೋರಾಟ ಮುಂದುವರಿಯಬೇಕು ಎಂದು ಪ್ರೊ.ರಂಗಪ್ಪ ಹಾಗೂ ನಂದೀಶ ಕರೆಕೊಟ್ಟರು.