27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Spread the love

ಚಾಮರಾಜನಗರ: ತಾವು ವೃತ್ತಿ ಆರಂಭಿಸಿದ ಶಾಲೆಯಲ್ಲಿ 27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಸೇರಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಿ. ಕಾಶಿ ಆರಾಧ್ಯ ಅವರು ಸೇವೆಯಿಂದ ನಿವೃತ್ತಿ ಹೊಂದಿದರು.

ಈ ವೇಳೆ ತಮ್ಮ ಪ್ರೀತಿಯ ಗುರುವಿಗೆ ಹಳೇ ವಿದ್ಯಾರ್ಥಿಗಳು ಚಿನ್ನದುಂಗುರ ತೊಡಿಸಿ ಅಭಿಮಾನ ಮೆರೆದರು.

ಕಾಶಿ ಆರಾಧ್ಯ ಅವರು ತಮ್ಮ ಶಾಲೆಯ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಸಮವಸ್ತ್ರ ವಿತರಿಸಿದ್ದು ವಿಶೇಷವಾಗಿತ್ತು.

ಜೊತೆಗೆ, ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿ ಶಾಲೆ ಮತ್ತು ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರ ಪ್ರೀತಿ, ಗೌರವವನ್ನು ಸ್ಮರಿಸಿದರು.

ಕಾಶಿ ಆರಾಧ್ಯ ಅವರು ಮೂಲತಃ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು,ಅಲ್ಲಿಂದ ಹಿರೇಬೇಗೂರಿಗೆ 27 ವರ್ಷ ನಿತ್ಯ 8 ಕಿ.ಮೀ ಕಾಲ್ನಡಿಗೆಯಲ್ಲೇ ಬರುತ್ತಿದ್ದುದು ವಿಶೇಷ.

ಅವರ ಬಳಿ ಸೈಕಲ್, ಸ್ಕೂಟರ್ ಯಾವುದೂ ಇಲ್ಲ. ಬಸ್ ಮತ್ತು ಇತರೆ ವಾಹನಕ್ಕಾಗಿ ಕಾಯದೇ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಿ ಮಕ್ಕಳಲ್ಲೂ ಶಿಸ್ತು ಮೂಡಿಸಿದ್ದರು.

ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರ ಮನ ಗೆದ್ದಿದ್ದ ಕಾಶಿ ಆರಾಧ್ಯರಿಗೆ ಜನರು ತುಂಬು ಪ್ರೀತಿ, ಭಾರದ ಮನಸ್ಸಿನಿಂದ ಬೀಳ್ಕೊಟ್ಟರು.

ನೆಚ್ಚಿನ ಶಿಕ್ಷಕರ ಕುರಿತು ಶಾಲೆಯ ವಿದ್ಯಾರ್ಥಿ ಮಧು ಮಾತನಾಡಿ, ಕಾಶಿ ಗುರುಗಳು ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು, ಅವರು ಕೇವಲ ಪಾಠ ಮಾತ್ರ ಮಾಡುತ್ತಿರಲಿಲ್ಲ, ವಿದ್ಯಾರ್ಥಿಗಳ ಕಷ್ಟಕ್ಕೂ ಸ್ಪಂದಿಸುತ್ತಿದ್ದರು,ಶಾಲೆಯ ಮೇಲೆ ಅವರ ಅಭಿಮಾನ ಹೇಳತೀರದು, ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಪ್ರಾರ್ಥಿಸಿದರು.