ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆ ಹಿರಿಯ ಸಚಿವ ಕೆ. ಎನ್. ರಾಜಣ್ಣ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದು,ಇದರ ಹಿಂದಿರುವ ಪ್ರಮುಖ ಮಂತ್ರಿ ಯಾರೆಂದು ಪತ್ತೆಯಾಗಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಇದೇ ರೀತಿ 48 ರಾಜಕೀಯ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ರಚಿಸುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಪ್ರಮುಖ ಮಂತ್ರಿ ಒಬ್ಬರ ವಿರುದ್ಧ ಆರೋಪ ಮಾಡಿದ್ದಾರೆ. ಬಿಜೆಪಿಯ ಪ್ರಮುಖ ಶಾಸಕ ಬಸವರಾಜ ಪಾಟೀಲ್ ಯತ್ನಾಳ್, ಮುನಿರತ್ನಂ ಸೇರಿದಂತೆ ಅನೇಕ ಶಾಸಕರುಗಳು ಚರ್ಚಿಸಿದ್ದಾರೆ. ಇಂತಹ ಗಂಭೀರ ಆರೋಪದ ಹಿಂದಿರುವ ಪ್ರಮುಖ ಮಂತ್ರಿ ಯಾರೆಂಬುದನ್ನು ಕೂಡಲೇ ಸರ್ಕಾರ ಸೂಕ್ತ ಪ್ರಾಧಿಕಾರಗಳಿಂದ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.

ತನ್ನ ರಾಜಕೀಯ ಉದ್ದೇಶಕ್ಕಾಗಿ ಇತರರನ್ನು ಬಲಿಕೊಡುವಂತಹ ಕೆಟ್ಟ ಪ್ರವೃತ್ತಿ ರಾಜ್ಯದಲ್ಲಿ ಅನೇಕ ವರ್ಷಗಳಿಂದ ಮುಂದುವರಿಯುತ್ತಲೇ ಇದೆ. ಈಗಲಾದರೂ ಈ ಅನಿಷ್ಠ ರಾಜಕೀಯ ಷಡ್ಯಂತ್ರಗಳನ್ನು ಬಲಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರುಗಳ ಆಯೋಗವನ್ನು ರಚನೆ ಮಾಡಿ ಈ ಷಡ್ಯಂತ್ರ ಗಳ ಹಿಂದಿರುವ ಪ್ರಮುಖ ಮಂತ್ರಿ ಹಾಗೂ ಕಿಂಗ್ ಪಿನ್ ಯಾರೆಂಬುದನ್ನು ಪತ್ತೆ ಹಚ್ಚಿ ಜನತೆಗೆ ತಿಳಿಯುವಂತೆ ಮಾಡಬೇಕು ಮತ್ತು ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಸಂಪೂರ್ಣವಾಗಿ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ವೈಫಲ್ಯ ಗಳು ಬಟಾ ಬಯಲಾಗಿದೆ. ಜನತೆಯ ಮುಂದೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸದನದ ಕಡೆಯ ದಿವಸ ಈ ರೀತಿಯ ಬಾಂಬ್ ಹಾಕಿ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ದುರುದ್ದೇಶವೂ ಕೂಡಿರಬಹುದು ಎಂದು ಸೀತಾರಾಮ್ ಗುಂಡಪ್ಪ ಅನುಮಾನ ವ್ಯಕ್ತಪಡಿಸಿದರು.
