ಗ್ಯಾರಂಟಿ ಯೋಜನೆಗಳು: ಸಂಕಷ್ಟಕ್ಕೆ ಸಿಲುಕಿದ ತೆಲಂಗಾಣ ಸರ್ಕಾರ

ಹೈದರಾಬಾದ್‌: ಗ್ಯಾರಂಟಿ ಯೋಜನೆ ಜಾರಿ ಮಾಡಿ ಈಗಾಗಲೇ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು,ಇತ್ತ ತೆಲಂಗಾಣ ರೇವಂತ್‌ ರೆಡ್ಡಿ ಸರ್ಕಾರವೂ ಸಂಕಷ್ಟಕ್ಕೆ ತುತ್ತಾಗಿದೆ.

ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ದುಡ್ಡಿಲ್ಲ ಎಂದು ರೇವಂತ್‌ ರೆಡ್ಡಿ ಸರ್ಕಾರ
ಹೇಳಿದೆ.

ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗ ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4 ಸಾವಿರ ಕೋಟಿ ರೂ ಸಾಲ ಪಡೆದಿದ್ದೇವೆ ಎಂದು ಸಿಎಂ ರೇವಂತ್‌ ರೆಡ್ಡಿ ಅವರೇ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಹಣ ಇಲ್ಲದ ಕಾರಣ ರಾಜ್ಯದ ಸರ್ಕಾರಿ ನೌಕರರಿಗೆ ಪ್ರತೀ ತಿಂಗಳ ಆರಂಭದಲ್ಲಿ ವೇತನ ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ. ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ರೇವಂತ್‌ ರೆಡ್ಡಿ ತಮ್ಮ ರಾಜ್ಯದ ಕರಾಳ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದರು.

ರಾಜ್ಯದ ಸಾಲದ ಮೊತ್ತ ಈಗ 7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ರಾಜ್ಯದ ಮಾಸಿಕ ಆದಾಯ 18,500 ಕೋಟಿ ರೂ. ಇದೆ. ಅದರಲ್ಲಿ 6,500 ಕೋಟಿ ರೂ. ವೇತನ ಮತ್ತು ಪಿಂಚಣಿ ಪಾವತಿಗೆ ಹೋಗುತ್ತಿದೆ. 6,500 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಬೇಕು. ಉಳಿದ ಕೇವಲ 5,000 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ಉಳಿದ ವೆಚ್ಚಗಳಿಗೆ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದು ಹೇಳಿದ್ದರು.

2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಪ್ರಕಟಿಸಿ ಅಧಿಕಾರಕ್ಕೆ ಏರಿತ್ತು. ಇದರಿಂದ ಉತ್ತೇಜನಗೊಂಡ ಕಾಂಗ್ರೆಸ್‌ ತೆಲಂಗಾಣ ಚುನಾವಣೆಯಲ್ಲೂ ಗ್ಯಾರಂಟಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಏರಿತ್ತು.

ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಆಡಳಿತದ ಮತ್ತೊಂದು ರಾಜ್ಯವಾದ ಹಿಮಾಚಲಪ್ರದೇಶದಲ್ಲೇ ಇದೇ ಪರಿಸ್ಥಿತಿ ನಿರ್ಮಾಣವಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ವೇತನ, ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಿಎಂ, ಶಾಸಕರ ವೇತನ ಪಾವತಿ ಮುಂದೂಡಲಾಗಿತ್ತು.

ಇದನ್ನೆಲ್ಲ ನೋಡುತ್ತಿದ್ದರೆ ಕರ್ನಾಟಕದ ಪಾಡೇನಪ್ಪಾ ಎಂದು ಜನತೆ ಆತಂಕ ಪಡುವಂತಾಗಿದೆ.