ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೇಸಿಗೆ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ಪರಿಸ್ಥಿತಿ ನಿಭಾಯಿಸಿ ಎಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾ. ಪಂ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರಿಸ್ಥಿತಿ ನಿಭಾಯಿಸುವ ಸಂಬಂಧ ಹಾಗೂ ಸ್ವಚ್ಛತೆ ಕುರಿತು ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯ ಪಾಲಕ ಅಭಿಯಂತರರು ಹಾಗೂ ಗ್ರಾ.ಪಂ. ಪಿ.ಡಿ.ಒ ಗಳ ಸಭೆಯಲ್ಲಿ ಮಾತನಾಡಿದ ಅವರು ಬೇಸಿಗೆಯಲ್ಲಿ ನೀರಿನ ಭವಣೆ ಎದುರಿಸಲು ತಕ್ಷಣದಿಂದಲೇ ಸಜ್ಜಾಗಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದ ಹಾಗೆ ಮುಂಜಾಗ್ರತೆ ವಹಿಸುವ ಸಲುವಾಗಿ ಮಾರ್ಚ್ 1 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹಾಗೆಯೇ ಮಾರ್ಚ್ 7 ರಂದು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ವ್ಯಾಪ್ತಿಯ ಗ್ರಾ.ಪಂ. ಗಳ ಸಭೆ ನಡೆಸಲಾಗುತ್ತಿದೆ ಎಂದು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ ಸಭೆಯಲ್ಲಿ ತಿಳಿಸಿದರು

ಸಭೆಯಲ್ಲಿ ಭಾಗವಹಿಸಿದ್ದ ಪಾಳ್ಯ, ಚಿಕ್ಕಲ್ಲೂರು, ತೆಳ್ಳನೂರು, ಧನಗೆರೆ, ಸತ್ತೇಗಾಲ, ಮದುವನಹಳ್ಳಿ, ದೊಡ್ಡಿಂದುವಾಡಿ ಸಿಂಗನಲ್ಲೂರು, ಕೊಂಗರಹಳ್ಳಿ, ಗ್ರಾಮ ಪಂಚಾಯಿತಿಗಳ ಪಿಡಿಒಗಳು ನಮ್ಮ ಪಂಚಾಯಿತಿಗಳಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ, ಬೇಸಿಗೆ ವೇಳೆ ಕುಡಿಯುವ ನೀರಿನ ಭವಣೆ ಉಂಟಾದರೆ ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಟ್ಯಾಂಕ್ ಗಳು ತೊಂಬೆಗಳು ಹಾಗೂ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಹೇಳಿದರು.

ಈ ನಡುವೆ ಮಾತನಾಡಿದ ಧನಗೆರೆ ಗ್ರಾ.ಪಂ. ಪಿ.ಡಿ.ಒ ಕಮಲ್ ರಾಜ್, ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 15 ನೇ ಹಣಕಾಸು ಯೋಜನೆಯಡಿ 14 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಈಗಾಗಲೇ ಸ್ವಚ್ಛಗೊಳಿಸಿರುವ ಟ್ಯಾಂಕ್ ಗಳು, ತೊಂಬೆಗಳು ಹಾಗೂ ನೀರಿನ ತೊಟ್ಟಿಗಳಿಗೆಲ್ಲಾ ಒಂದೇ ರೀತಿಯ ಬಣ್ಣ ಬಳಿಸಿ ಎಂದು ತಾಕಿತು ಮಾಡಿದರು.

ಹಾಗೆಯೇ ಯಾವಾಗ ಸ್ವಚ್ಛಗೊಳಿಸಿದ್ದೀರಾ ಮುಂದೆ ಸ್ವಚ್ಛಗೊಳಿಸುವ ದಿನಾಂಕ ಯಾವುದು ಎಂಬುದನ್ನು ನೀರಿನ ಟ್ಯಾಂಕ್ ಹಾಗೂ ತೊಂಬೆಗಳ ಮೇಲೆ ಬರೆಸಬೇಕು. ಇದರಿಂದಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಅಭಿಯಾನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಪಿ ಡಿ ಒ ಗಳಿಗೆ ಸೂಚಿಸಿದರು.

ಮದುವನಹಳ್ಳಿ ದೊಡ್ಡ ಗ್ರಾಮವಾಗಿದ್ದು ಇಲ್ಲಿ 7,574 ಜನಸಂಖ್ಯೆ ಇದೆ ಆದರೆ ಇಲ್ಲಿರುವುದು ಒಂದೇ ಶುದ್ಧ ನೀರಿನ ಕುಡಿಯುವ ನೀರಿನ ಘಟಕ ಆದ್ದರಿಂದ ಇಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ತಾ.ಪಂ. ಇಒ ಗುರು ಶಾಂತಪ್ಪ ಬೆಳ್ಳುಂಡಗಿ ಅವರಿಗೆ ಸಲಹೆ ನೀಡಿದರು.

ಇದೇ ವೇಳೆ ಕಾಡಂಚಿನ ಗ್ರಾಮಗಳ ಜನರಲ್ಲಿ ಕಾಡ್ಗಿಚ್ಚು ಬೆಂಕಿ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕುರಿತು ತಹಸಿಲ್ದಾರ್ ಬಸವರಾಜ್ ಅವರಿಗೆ ಶಾಸಕರು ಸೂಚಿಸಿದಾಗ ಪ್ರತಿಕ್ರಿಯಿಸಿದ ತಹಸಿಲ್ದಾರರು ರಾಜಸ್ವ ನಿರೀಕ್ಷಕರು, ಅಗ್ನಿಶಾಮಕ ದಳದ ಅಧಿಕಾರಿಗಳು ಪಿಡಿಒ ಹಾಗೂ ಅರಣ್ಯ ಅಧಿಕಾರಿಗಳ ತಂಡ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಬೆಂಕಿ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ, ಹನೂರು, ಲೊಕ್ಕನಹಳ್ಳಿ ಹೋಬಳಿಗಳಿಗೆ ಹೋಲಿಕೆ ಮಾಡಿದರೆ ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಅಭಾವವಿಲ್ಲ,ಏಕೆಂದರೆ ಅಂತರ್ಜಲ ಇಲ್ಲಿ ಚೆನ್ನಾಗಿದೆ ಎಂದು ತಿಳಿಸಿದರು.

ಆದರೂ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿದ್ದಾರೆ. ಹಾಗೆ ಸ್ವಚ್ಛತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ, ಇನ್ನು 15 ದಿನಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ, ಸ್ವಚ್ಛತೆ ಇದ್ದರೆ ರೋಗ ಹರಡುವುದಿಲ್ಲ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ  ತಹಸೀಲ್ದಾರ್ ಎ.ಇ.ಬಸವರಾಜು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ. ಗ್ರಾಮೀಣ ಕಃಡಿಯುವ ನೀರು ಯೋಜನೆಯ ಕೊಳ್ಳೇಗಾಲ ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ಸುಧನ್ವ ನಾಗ್ ಹಾಗೂ ಪಾಳ್ಯ ಹೋಬಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.