ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿ ಎಸ್.ಪಿ.ಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ನೂತನ ಶಾಲಾ ಕಟ್ಟಡವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿಯವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ನಿರಂಜನ್ ಅವರು ತಮ್ಮ ತಾಯಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಈ ಹಳ್ಳಿಗಾಡಿನ ಮಕ್ಕಳ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಗ್ರಾಮದ ಜನತೆಯ ಸೇವೆ ಮಾಡಲು ಮುಂದಾಗಿದ್ದಾರೆ ದೊಡ್ಡ ದೊಡ್ಡ ನಗರ ವನ್ನು ಬಿಟ್ಟು ಹುಟ್ಟಿದ ಊರಿನಲ್ಲಿ ಜನರ ಸೇವೆ ಮಾಡುವ ಜೊತೆಗೆ ಅನೇಕ ಗ್ರಾಮೀಣ ಮಕ್ಕಳು ಉತ್ತಮ ಶಿಕ್ಷಣ ಪಡೆಯುಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನ ಎಂ ಎಸ್ ರಾಮಯ್ಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ನಿರಂಜನ್ ಅವರು ಬೆಂಗಳೂರಿನಂತ ಸಮುದ್ರದಲ್ಲಿ ಈಜಲು ಸಾಧ್ಯವಿಲ್ಲವೆಂದು ಸ್ವಗ್ರಾಮಕ್ಕೆ ಬಂದು ಶಿಕ್ಷಣ ಸಂಸ್ಥೆ ತೆರೆದಿದ್ದಾರೆ
ಬಹಳಷ್ಟು ಶಿಕ್ಷಣ ಸಂಸ್ಥೆಗಳನ್ನು ನಾನು ನೋಡಿದ್ದೇನೆ ಎಲ್ಲವೂ ಕಮರ್ಷಿಯಲ್ ಓರಿಯೆಂಟೆಡ್ ಶಿಕ್ಷಣ ಸಂಸ್ಥೆಗಳು. ಬೆಂಗಳೂರಿನಂತಹ ಪಟ್ಟಣದಲ್ಲಿ ನಾನು ಗಮನಿಸಿರುವ ಹಾಗೆ ಸೋಫಿಯಾ ಸ್ಕೂಲ್ ಅಂತ ಇದೆ ನನ್ನಷ್ಟೇ ವಯಸ್ಸಾಗಿದೆ ಅದಕ್ಕೆ 60 ವರ್ಷಕ್ಕೂ ಹೆಚ್ಚು ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಆ ಶಿಕ್ಷಣ ಸಂಸ್ಥೆಯಲ್ಲಿ ಮದುವೆಗೂ ಮುನ್ನವೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರವೇಶದ ಸೀಟು ಕಾಯ್ದಿರಿಸಬೇಕು. ಆ ಕಾಲದಲ್ಲಿ ಅಲ್ಲಿ 5 ಲಕ್ಷ ರೂ. ಡೊನೇಷನ್ ಮುಂಗಡ ಸೀಟು ಕಾಯ್ದಿರಸಲಿಕ್ಕೆ ಎಂದು ವಿವರಿಸಿದರು.
ಬೆಂಗಳೂರಿನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ನೀವು ಇಲ್ಲಿ ಬಂದು ಶಿಕ್ಷಣ ಸಂಸ್ಥೆ ತೆರೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನಾನು ಶಾಸಕನಾಗಿ ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು.
ಎಂ ಎಸ್ ರಾಮಯ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ ಮಂಜುನಾಥ್ ಮಾತನಾಡಿ ಉತ್ತಮ ಮಾರ್ಗದರ್ಶಕರಿದ್ದಾಗ ಸಾಧನೆ ಮಾಡುವುದು ಸುಲಭ. ವಿದ್ಯೆ ಇದ್ದ ಕಡೆ ವಿನಯ ಬರುತ್ತದೆ ವಿನಯದಿಂದ ಗೌರವ ಸಂಪಾದನೆಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಕೆ.ಶಿವರಾಜು ಮಾತನಾಡಿ ಮಾನವನನ್ನು ಮನುಷ್ಯನನ್ನಾಗಿ ಪರಿವರ್ತನೆ ಮಾಡುವ ಸಾಧನ ಶಿಕ್ಷಣ. ಪಟ್ಟಣದಲ್ಲಿ ಶಿಕ್ಷಣ ಪಡೆಯುವುದು ಸುಲಭ ಆದರೆ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಯಶಸ್ವಿಯಾಗುವುದು ಸುಲಭದ ಮಾತಲ್ಲ ಇಂತಹ ಕೆಲಸಕ್ಕೆ ನಿರಂಜನ್ ಅವರ ಕುಟುಂಬ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕುಂತೂರು ವೀರ ಸಿಂಹಾಸನ ಮಠದ ಶ್ರೀ ಶಿವಪ್ರಭು ಸ್ವಾಮೀಜಿರವರು ಆಶೀರ್ವಚನ ನೀಡಿದರು
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕುಂತೂರು ರಾಜೇಂದ್ರ, ಸ್ಥಳೀಯ ಗ್ರಾ ಪಂ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯೆ ರತ್ನಮ್ಮ, ಶಾಲೆಯ ಸಂಸ್ಥಾಪಕ ನಿರಂಜನ್. ಕೆ. ಗೌಡ, ಮುಖ್ಯ ಶಿಕ್ಷಕಿ ಮಮತಾ, ಶನೇಶ್ವರ ದೇವಸ್ಥಾನದ ಅರ್ಚಕ ಮಹಾದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.