ಹಕ್ಕಿ ಜ್ವರದ ಭೀತಿ:ಮೃಗಾಲಯದಲ್ಲಿ ಕಟ್ಟೆಚ್ಚರ-ರಂಗಸ್ವಾಮಿ

Spread the love

ಮೈಸೂರು,ಮಾ.11: ರಾಜ್ಯದಲ್ಲೂ ಹಕ್ಕಿ ಜ್ವರದ ಭೀತಿ ಇರುವುದರಿಂದ ಮೈಸೂರಿನ‌ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಂಗಸ್ವಾಮಿ ಅವರು, ಮೃಗಾಲಯದಲ್ಲಿರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದೇವೆ.ಅದರಲ್ಲಿ ಕಾಲನ್ನ ಅದ್ದಿ ಜನ ಬರಬೇಕು. ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕೊಳ್ಳಲು ಸೂಚಿಸಿದ್ದೇವೆ, ಪಕ್ಷಿಗಳ ಹಿಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನ ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಪ್ರಾಣಿಗಳಿಗೆ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.

ಬೇಸಿಗೆ ಶುರುವಾಗಿದೆ. ಪ್ರಾಣಿಗಳಿಗೆ ತೊಂದರೆ ಆಗದಂತೆ ಜೆಟ್ ಗಳು, ಸ್ಪ್ರಿಂಕ್ಲರ್ ಗಳ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದೇವೆ. ಮೃಗಾಲಯದಲ್ಲಿ ಒಟ್ಟು 45 ಕಡೆ ಈ ರೀತಿ ಜೆಟ್ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಗೋರಿಲ್ಲಾ, ಚಿಂಪಾಜಿ, ಕೋತಿಗಳಿಗೆ ಫ್ಯಾಮ್ ಏರ್ ಕೂಲರ್ ಗಳ ಅಳವಡಿಕೆ ಜೊತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತಹ ತಂಪಾದ ಹಣ್ಣುಗಳನ್ನು ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಜಿಂಕೆ, ಕಡವೆಗಳಿಗೆ ಅಲ್ಲಲ್ಲಿ ನೀರಿನ‌ ಕೊಳ, ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ. ನೆರಳಿಗೆ ಶೆಡ್ ನಿರ್ಮಾಣ ಕೂಡ ಮಾಡಲಾಗಿದೆ. ಒಟ್ಟಾರೆ ಬೇಸಿಗೆ ನಿರ್ವಹಣೆಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನ ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ರಂಗಸ್ವಾಮಿ ವಿವರಿಸಿದರು.