ಮೈಸೂರು,ಮಾ.7: ಮದ್ಯ ಮತ್ತು ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತು ಕೊಳ್ಳಿ, ಅಕಸ್ಮಾತ್ ಈ ಚಟಕ್ಕೆ ಒಳಗಾದರೆ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ಹೇಳಿದರು.
ಈ ಚಟ ಇಡೀ ನಿಮ್ಮ ಬದುಕನ್ನೇ ನಾಶದ ಅಂಚಿಗೆ ಕರೆದುಕೊಂಡು ಹೋಗುತ್ತದೆ ಎಂದು ಎಚ್ಚರಿಸಿದರು.
ಯುವರಾಜ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದಷ್ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಈ ರೀತಿಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಆಯೋಜಿಸುತ್ತಾ ಬಂದಿದೆ. ಕಾರಣ ವಿದ್ಯಾರ್ಥಿಗಳ ಮೇಲೆ ಮದ್ಯ ಹಾಗೂ ಮಾದಕ ವಸ್ತುಗಳು ಬೀರುವ ಪರಿಣಾಮದಿಂದ. ಡ್ರಿಂಕ್ಸ್, ಡ್ರಗ್ಸ್, ಅದನೆಲ್ಲಾ ಮೀರಿದ ಮೊಬೈಲ್ ಅಡಿಕ್ಷನ್ ಎಂಬುದು ಪ್ರಾರಂಭವಾಗಿದೆ. ಮೊಬೈಲ್ ಬಳಕೆ ಎಂಬುದು ಒಂದು ವ್ಯಸನ ಎಂದರೆ ತಪ್ಪಾಗುವುದಿಲ್ಲ ಎಂದು ಹೇಳಿದರು.
ನಾವು ಒಂದು ಒಳ್ಳೆಯ ಪರಿಸರ ವಾತಾವರಣದಲ್ಲಿ ಬೆಳೆದರೆ ಇಂತಹ ಕೆಟ್ಟ ಅಭ್ಯಾಸಗಳು, ವ್ಯಸನಗಳು ನಮ್ಮ ಹತ್ತಿರ ಬರುವುದಿಲ್ಲ. ನಾವೂ ಎಲ್ಲೆ ಇದ್ದರೂ ಸಹ ಮಾದರಿಯಾಗಿ ತೆಗೆದುಕೊಳ್ಳಬೇಕು, ಒಳ್ಳೆಯದನ್ನು ಅನುಸರಿಸಬೇಕು, ಒಳ್ಳೆಯ ದಾರಿಯಲ್ಲಿ ಹೋಗುತ್ತಿರುವವರನ್ನು ಅನುಸರಿಸಬೇಕು ಎಂದು ಕಿವಿ ಮಾತು ಹೇಳಿದರು.
ಮೈಸೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶಿವಶಂಕರ್ ಅವರು ಮಾತನಾಡಿ ಯುವಕರು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗು ತ್ತೀರಿ, ಪೋಷಕರು ಮಕ್ಕಳಲ್ಲಿ ಭೇದಭಾವವನ್ನು ಮಾಡಬಾರದು. ನಮ್ಮ ದೇಹದ ಎರಡು ಭಾಗಗಳಾದ ಮೆದುಳು ಹೊಟ್ಟೆಯನ್ನು ನೀವು ಸದಾ ಕಾಳಜಿಯಿಂದ ನೋಡಿಕೊಳ್ಳಬೇಕು. ಈ ಎರಡು ಅಂಶಗಳನ್ನು ನೀವು ನಿರ್ಲಕ್ಷಿಸಿದರೆ ನಿಮ್ಮ ಭವಿಷ್ಯ ಹಾಳಾಗುತ್ತದೆ ಎಂದು ತಿಳಿಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ ಮೊದಲು ಆರೋಗ್ಯವೇ ಭಾಗ್ಯ ಎಂದಿತ್ತು. ಈಗ ಆರೋಗ್ಯವೇ ಎಲ್ಲಾ ಎಂಬಂತಾಗಿದೆ. ಆರೋಗ್ಯ ಇಲ್ಲದೇ ನಾವು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಪತ್ರಕರ್ತ ಎಸ್.ಟಿ ರವಿಕುಮಾರ್ ಅವರು ಮಾತನಾಡಿ ಯುವ ಪೀಳಿಗೆ ಯಾವುದೇ ಒಂದು ಗಂಟೆಯ ಸಂತೋಷಗಳಿಗೆ ನೀವು ಇಂತಹ ಕೆಟ್ಟ ಚಟಗಳಿಗೆ ಬಲಿಯಾಗಿ ನಿಮ್ಮ ಜೀವನವನ್ನು ನಾಶ ಮಾಡಿಕೊಳ್ಳಬಾರದು ತಂದೆ ತಾಯಿ ನಿಮ್ಮ ಬೆಳವಣಿಗೆಗೆ ಆಸೆಯಿಂದ ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ ಅವರನ್ನು ನಿರಾಶೆ ಮಾಡಬೇಡಿ ಎಂದು ಬುದ್ದಿಮಾತು ಹೇಳಿದರು.
ಕೆ. ಆರ್. ಆಸ್ಪತ್ರೆ ಮನೋರೋಗ ತಜ್ಞರಾದ ಡಾ.ಬಿ.ಎನ್ ರವೀಶ್ ಅವರು ಮಾತನಾಡಿ ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಇಂತಹ ದುಶ್ಚಟಗಳಿಗೆ ಬಲಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಅವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಅಜಯ್ ಕುಮಾರ್ ಸೇರಿದಂತೆ ಕಾಲೇಜಿನ ಬೋದಕ ಹಾಗೂ ಬೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
