ಮೈಸೂರು,ಮಾ.6: ಮೈಸೂರಿನ ಅಶೋಕಾಪುರಂ ನ ಅಂಬೇಡ್ಕರ್ ಪಾರ್ಕ್ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಸಿಬ್ಬಂದಿ ಗಮನಕ್ಕೆ ತಂದ ಪ್ರೊಫೆಸರ್ ಮನೆಗೆ ನುಗ್ಗಿದ ಯುವಕರ ಗುಂಪು ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.
ಪಾರ್ಕ್ ತಂಟೆಗೆ ಬಂದ್ರೆ ಕೊಲೆ ಮಾಡ್ತೀವಿ ಎಂದು ಇರಾತಕರು ಬೆದರಿಕೆ ಕೂಡಾ ಹಾಕಿದ್ದಾರೆ.
ಹಲ್ಲೆಗೊಳಗಾದ ಪ್ರೊಫೆಸರ್ ಪಾರ್ಕ್ ಮೇಂಟೈನನ್ಸ್ ಮಾಡುವ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಡಾ.ಎಂ.ಪಿ.ರಮೇಶ್ ಹಲ್ಲೆಗೊಳಗಾದವರು.
ಪಾರ್ಕ್ ನಿರ್ವಹಣೆ ಜವಾಬ್ದಾರಿ ಹೊತ್ತ ರಕ್ಷಿತ್ ಆರಾಧ್ಯ,ಜಿತೇಂದ್ರ,ಸಮೃದ್ದಿ ಹಾಗೂ ಶ್ರೇಯಸ್ ಹಲ್ಲೆ ನಡೆಸಿದ ಯುವಕರೆಂದು ಆರೋಪಿಸಿ ದೂರು ನೀಡಲಾಗಿದೆ.
ರಜೆ ಮೇಲೆ ಮೈಸೂರಿಗೆ ಬಂದಿದ್ದ ಡಾ.ರಮೇಶ್, ಉದ್ಯಾನವನದಲ್ಲಿರುವ ಗಿಡಗಳಿಗೆ ನೀರು ಹಾಕಿ ಸ್ವಚ್ಛತೆ ಕಾಪಾಡುವಂತೆ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಕುಮಾರ್ ಎಂಬುವರಿಗೆ ಮನವಿ ಮಾಡಿದ್ದಾರೆ.
ಇಷ್ಟಕ್ಕೇ ಪಾರ್ಕ್ ಸ್ವಚ್ಛತೆ ಜವಾಬ್ದಾರಿ ಹೊತ್ತಿದ್ದ ರಕ್ಷಿತ್ ಆರಾಧ್ಯ ತನ್ನ ಸ್ನೇಹಿತರಾದ ಜಿತೇಂದ್ರ,ಸಮೃದ್ದಿ,ಶ್ರೇಯಸ್ ರನ್ನ ಕರೆತಂದು ಅಕ್ರಮವಾಗಿ ರಮೇಶ್ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೊಮ್ಮೆ ಪಾರ್ಕ್ ವಿಚಾರಕ್ಕೆ ಬಂದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ.
ಹಲ್ಲೆಗೊಳಗಾದ ಡಾ.ರಮೇಶ್ ಚಿಕಿತ್ಸೆ ಪಡೆದು ಆಶೋಕಪುರಂ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
