ಮೈಸೂರು, ಮಾ.6: ಜೀತ ಪದ್ಧತಿಯ ನಿರ್ಮೂಲನಾ ಕಾಯ್ದೆ ಜಾರಿಯಲ್ಲಿದ್ದರೂ, ಹಲವೆಡೆ ಬಲವಂತದ ಜೀತ ಪದ್ಧತಿ ಕಂಡುಬರುತ್ತಿದೆ ಆದ್ದರಿಂದ ಕಾನೂನಿನಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದಿನೇಶ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜೀತ ಪದ್ದತಿ ನಿರ್ಮೂಲನೆ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜೀತ ಪದ್ದತಿ ನಿಷೇಧ ಕುರಿತು ಅಧಿಕಾರಿಗಳಿಗೆ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 50 ಅಧಿಕಾರಿಗಳನ್ನು ಜೀತ ಪದ್ಧತಿಯ ನಿರ್ಮೂಲನಾ ಅಧಿಕಾರಿಗಳನ್ನಾಗಿ ನೇಮಿಸಿದೆ, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಜೀತ ಪದ್ಧತಿಯ ಕಾರ್ಮಿಕರು ಕಂಡು ಬಂದಲ್ಲಿ ಅವರ ರಕ್ಷಣೆ ಮಾಡುವುದು ಮತ್ತು ಪುರ್ನವಸತಿ ಒದಗಿಸಿಕೊಡುವುದು ಅವರ ಕರ್ತವ್ಯ ಎಂದು ತಿಳಿಸಿದರು.
ಜೀತಪದ್ಧತಿ ತಡೆಗಟ್ಟುವಿಕೆಗೆ ಹೆಚ್ಚಿನ ಒತ್ತು ನೀಡಬೇಕು, ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮವಹಿಸಬೇಕೆಂಬುದರ ಬಗ್ಗೆ ವಿಷಯವನ್ನು ತಜ್ಞರು ಕಾರ್ಯಾಗಾರದಲ್ಲಿ ತಿಳಿಸಿಕೊಡಲಿದ್ದು, ಅದರನ್ವಯ ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲೂ ಕೂಡ ಜೀತಪದ್ಧತಿ ಚಾಲ್ತಿಯಲ್ಲಿರುವುದು ಅತ್ಯಂತ ವಿಷಾಧನೀಯ ಎಂದು ಹೇಳಿದರು.
ಇದು ಸೂಕ್ಷ್ಮ ವಿಚಾರವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ಒಗ್ಗಟ್ಟಾಗಿ ಜೀತಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರದಿಂದ ಜೀತಪದ್ಧತಿ ನಿರ್ಮೂಲನೆಗೆ ನಿಗದಿಪಡಿಸಿರುವ ಎಸ್.ಒ.ಪಿ.ಯಂತೆ ಮತ್ತು ಸರ್ಕಾರದ ಆದೇಶದಂತೆ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಾಗಿರುತ್ತದೆ ಎಂದು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಜೀವಿಕ ಸಂಸ್ಥೆ, ಸಂಪನ್ಮೂಲ ವ್ಯಕ್ತಿ ಬಸವರಾಜು, ಉಪಕಾರ್ಯದರ್ಶಿ ಸವಿತಾ ಬಿ.ಎಂ., ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜೀವಿಕ ಸಂಸ್ಥೆಯ ತಂಡದವರು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.