ಕೊಳ್ಳೇಗಾಲ: ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಎಸ್ ಸಿ ಪಿ ಯೋಜನೆಯಡಿ ಸುಮಾರು ಒಂದು ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ ಆರ್ ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಇಷ್ಟು ವರ್ಷವಾದರೂ ಸಿಂಗನಲ್ಲೂರು ಗ್ರಾಮ ಅಭಿವೃದ್ಧಿಯಾಗಿರಲಿಲ್ಲ,ಈ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಬಂದಿದ್ದು ಪರಿಶಿಷ್ಟ ಪಂಗಡಕ್ಕೆ 15 ಲಕ್ಷ ರೂ. ಮೀಸಲಿರಿಸಿ ಉಳಿದ 85 ಲಕ್ಷ ರೂ
ಅನುದಾನವನ್ನು ಪರಿಶಿಷ್ಟ ಜಾತಿಯ ಬೀದಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಂಡು, ಗ್ರಾಮದಲ್ಲಿ ಬಹುತೇಕವಾಗಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಮುಖವಾಗಿ ನನಗೆ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿಯಾಗಬೇಕು. ಮಲೆ ಮಾದೇಶ್ವರ ಬೆಟ್ಟ ಹೆದ್ದಾರಿಯಿಂದ ಗ್ರಾಮದವರೆಗೆ ಸುಮಾರು ಒಂದು ಕಿ.ಮೀ. ವರೆಗೆ ಈ ರಸ್ತೆ ಡಾಂಬರೀಕರಣ ಮಾಡುವುದು, ಹಾಗೆಯೇ ಸಂತೆ ಮಾಳ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಗ್ರಾಮದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಬಂದಿರುವ ಈ ಎಲ್ಲಾ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಅನುದಾನದಲ್ಲಿ ನಡೆಸುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು, ಇನ್ನು ಒಂದುವರೆ ಅಥವಾ ಎರಡು ವರ್ಷದ ಒಳಗೆ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಿಂಗಾನಲ್ಲೂರು ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿ ಕಡೆಗೆ ಕೊಂಡೊಯ್ಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂತರ ಶಾಸಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಯೋಜನಾ ಸಹಾಯಕ ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಬಸಮ್ಮ, ಸದಸ್ಯ ರಾಜು, ಮಾಜಿ ಸದಸ್ಯ ಮಂಜು,ಹಾಗೂ ಮುಖಂಡರುಗಳಾದ ಸಿಂಗಾನಲ್ಲೂರು ರಾಜಣ್ಣ, ಡಿ. ಕೆ ರಾಜು, ವಿಜಯ್ ಕುಮಾರ್, ಮರಿಸ್ವಾಮಿ, ಮಕರಾಜು, ಬೆಟ್ಟೇಗೌಡ, ಎಸ್.ಆರ್ ಮಹದೇವ್, ನಾಗರಾಜು ಮತ್ತಿತರರು ಹಾಜರಿದ್ದರು.