ಬೆಂಗಳೂರು: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಯಾವುದೇ ಆತಂಕ ಇಲ್ಲ, ಅವರು ಮುಡಾ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅನ್ನೋದು ಅವರ ತಲೆಯಲ್ಲಿ ಸ್ಪಷ್ಟವಾಗಿದೆ, ತಾವು ಕಾನೂನು ಬಾಹಿರ ತಪ್ಪು ಮಾಡಿಲ್ಲ ಅಂತ ಹೇಳಿದ್ದಾರೆ. ಸಿಎಂ ಆಗಿದ್ದಾಗಲೂ, ವಿಪಕ್ಷ ನಾಯಕ ಆಗಿದ್ದಾಗಲೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅಂತಾ ಅವರು ಹೇಳ್ತಾನೇ ಇದ್ದಾರೆ ಎಂದು ಪರಂ ಸಿದ್ದು ಪರ ಬ್ಯಾಟಿಂಗ್ ಮಾಡಿದರು.
ಸಿಎಂ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಇತ್ತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಹೇಳಿದ ಕೆಲವು ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದೆವು. ಇಲ್ಲಿನ ವಿದ್ಯಮಾನ, ಕೋರ್ಟ್ ನಡೆ ನೋಡಿಕೊಂಡು ನಂತರ ರಾಷ್ಟ್ರಪತಿಗಳ ಭೇಟಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.