ಮೈಸೂರು: ಹಲವಾರು ಸಮಾಜಾಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮೈಸೂರು ಜಿಲ್ಲೆಯಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಮಾದರಿಯಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥರಾದ ಸುದೀಪ್ ದಳವಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಸಾರ್ವಜನಿಕರು ಉತ್ತಮ ಆರೋಗ್ಯ ಹೊಂದುವಂತೆ ಮಾಡುವ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಉದ್ದೇಶ ಹೊಂದಿರುವ ಟಿಕೆಎಂ 2024-25ನೇ ಆರ್ಥಿಕ ವರ್ಷದಲ್ಲಿ ಮೈಸೂರು ಜಿಲ್ಲೆಯಲ್ಲಿ ಅತ್ಯಾಧುನಿಕ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳಿಂದ 3,98,870ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರತೀ ಘಟಕವು ಆರು ಹಂತಗಳ ಅತ್ಯಾಧುನಿಕ ಶುದ್ಧೀಕರಣ ಪ್ರಕ್ರಿಯೆಯನ್ನು ಹೊಂದಿದ್ದು, ಟೋಟಲ್ ಡಿಸ್ಸಾಲ್ವ್ ಡ್ ಸಾಲಿಡ್ಸ್ (ಟಿಡಿಎಸ್) ಗಳಂತಹ ಪ್ಯಾರಾಮೀಟರ್ ಗಳನ್ನು ಗಮನಿಸುವ ರಿಯಲ್ ಟೈಮ್ ವಾಟರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಈ ಘಟಕಗಳು ಹೆಚ್ಚು ಟಿಡಿಎಸ್ ಹೊಂದಿದ್ದು ಕಲುಷಿತಗೊಂಡಿರುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಶುದ್ಧ ನೀರನ್ನು ಒದಗಿಸುತ್ತದೆ.
ಈ ಘಟಕಗಳು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಲೇ ಸಮರ್ಪಕವಾಗಿ ಶುದ್ಧ ನೀರನ್ನು ಒದಗಿಸುತ್ತವೆ. ಈ ಯೋಜನೆಯ ಮೂಲಕ ಪ್ರತೀ ಗಂಟೆಗೆ ಒಟ್ಟು 7500 ಲೀಟರ್ ನೀರನ್ನು ಶುದ್ಧೀಕರಣಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಜನರ ಅಗತ್ಯಗಳನ್ನು ಪೂರೈಸಲು ಈ ಘಟಕಗಳನ್ನು ಸ್ಥಾಪಿಸಲಾಗಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಗಳು ಮತ್ತು ಜನ ಸಮುದಾಯದೊಂದಿಗೆ ಸಹಕಾರ ತತ್ವದಲ್ಲಿ ಟಿಕೆಎಂ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ.
ಈ ವೇಳೆ ಮಾತನಾಡಿದ ಸುದೀಪ್ ದಳವಿ ಅವರು, “ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಸಮಾಜ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದನ್ನು ಎಂದಿಗೂ ತಪ್ಪುವುದಿಲ್ಲ. ಈ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆಯು ನಾವು ಕಾರ್ಯ ನಿರ್ವಹಿಸುವ ಪ್ರದೇಶದ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ನಮ್ಮ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮುದಾಯದ ಅಗತ್ಯಗಳು ಮತ್ತು ರಾಷ್ಟ್ರೀಯ ಆದ್ಯತೆಗಳೊಂದಿಗೆ ನಮ್ಮ ಸಿಎಸ್ಆರ್ ಯೋಜನೆಗಳನ್ನು ಸಂಯೋಜಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಅರ್ಥಪೂರ್ಣ ಕೆಲಸ ಮಾಡಲು ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.
