ಬೆಂಗಳೂರು: ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಶಾಸಕರುಗಳು ಯಾವುದೇ ಕಾರಣಕ್ಕೂ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಬಿಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗ್ರೇಟರ್ ಬೆಂಗಳೂರು ಮಸೂದೆ ಎಂಬ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಮಸೂದೆಯನ್ನು ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲು ಹೊರಟಿರುವ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಬಿಬಿಎಂಪಿ ಚುನಾವಣೆಯನ್ನು ಸದ್ಯದಲ್ಲಿ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.
ಈ ಎರಡೂ ಪಕ್ಷಗಳ ಶಾಸಕರಿಗೆ ಬೆಂಗಳೂರಿನ ಅಭಿವೃದ್ಧಿ ಬೇಕಾಗಿಲ್ಲ ಬೆಂಗಳೂರಿನಿಂದ ಬರುವ ಕಟ್ಟಡ ನಿರ್ಮಾಣ ತೆರಿಗೆ, ಅಕ್ರಮ ಟೆಂಡರ್ ಗಳು, ಬೃಹತ್ ಕಾಮಗಾರಿಗಳ ಮೇಲಿನ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆಮದನಿಗಳ ಮೇಲೆ ಇವರ ಕಣ್ಣು ನೆಟ್ಟಿದೆ ಎಂದು ಡಾ. ಸತೀಶ್ ಕುಮಾರ್ ಗಂಭೀರ ಆರೋಪ ಮಾಡಿದರು.
ಬಿಜೆಪಿ ಸರ್ಕಾರದಲ್ಲಿ ಕೂಡಲೇ ಚುನಾವಣೆಯನ್ನು ನಡೆಸಿ ಎಂದು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾದ ಶಿವರಾಜ್ ಹಾಗೂ ಅಬ್ದುಲ್ ವಾಹಿಬ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು ನೀಡುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ಮೂರು ದಿನಗಳ ಹಿಂದೆ ಪಕ್ಷದ ವಕೀಲರ ಸಮಿತಿಯನ್ನು ನೇಮಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವುದನ್ನು ನೋಡಿದರೆ ಅನವಶ್ಯಕವಾಗಿ ಗೊಂದಲಗಳನ್ನು ಉಂಟು ಮಾಡಿ ಚುನಾವಣೆಯನ್ನು ಮುಂದೂಡುವುದೇ ಇವರ ಮುಖ್ಯ ಉದ್ದೇಶವಾದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಬೆಂಗಳೂರು ಅನೇಕ ಸಮಸ್ಯೆಗಳ ಆಗರವಾಗಿದ್ದು ನಾಗರೀಕರು ವಾಸ ಮಾಡಲು ಯೋಗ್ಯವಾದ ನಗರವಾಗಿ ಉಳಿದಿಲ್ಲ. ಕಳೆದ ಐದು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆಸದೆ ಎರಡೂ ಪಕ್ಷಗಳು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ, ವಿಧಾನಸಭೆಯಲ್ಲಿ ನೂತನ ಮಸೂದೆಗಳನ್ನು ಮಂಡನೆ ಮಾಡುವ ಮೂಲಕ, ನ್ಯಾಯಾಲಯಗಳ ಸಮಯವನ್ನು ವ್ಯರ್ಥ ಮಾಡಿ ಎರಡು ಪಕ್ಷಗಳ ಶಾಸಕರು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಮೂರು ಪಕ್ಷಗಳ ಶಾಸಕರುಗಳ ಪ್ರಮುಖ ನಾಯಕರುಗಳ ಕಪ್ಪು ಹಣದ ಸಾವಿರಾರು ಕೋಟಿ ಬೇನಾಮಿ ಆಸ್ತಿಗಳು ಬೆಂಗಳೂರಿನ ಸುತ್ತಮುತ್ತ ಇರುವ ಕಾರಣ ಗ್ರೇಟರ್ ಬೆಂಗಳೂರು ಕಾಯ್ದೆಯ ಮೂಲಕ ಏಳು ಪಾಲಿಕೆಗಳಾಗಿ ವಿಭಜನೆ ಮಾಡುತ್ತಿದ್ದಾರೆ. ಪಕ್ಷವು ಮುಂದಿನ ದಿವಸಗಳಲ್ಲಿ ಈ ಬಗ್ಗೆ ಹೋರಾಟ ನಡೆಸಲಿದೆ ಎಂದು ಡಾ. ಸತೀಶ್ ಎಚ್ಚರಿಸಿದರು.