ಜಾತಿ ಗಣತಿ ವರದಿ ಅನುಷ್ಠಾನ ಗ್ಯಾರಂಟಿ:ಸಿಎಂ

ಬೆಂಗಳೂರು: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತಾ ಜಾರಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ತೀವ್ರ ಒತ್ತಾಯ ಬಂದಾಗ ಪ್ರತಿಕ್ರಿಯಿಸಿದ ಸಿಎಂ,
ಸರ್ಕಾರ ಜಾತಿ ಗಣತಿ ಪರವಾಗಿದೆ, ವರದಿಯನ್ನು ಸ್ವೀಕರಿಸಲಾಗಿದೆ,ಖಂಡಿತಾ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನವೇ ಬೇಡ ಎಂದು ತಿಳಿಸಿದರು.

ತಮಿಳು ನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಭೆ ಆಗ್ರಹಿಸಿದಾಗ 1992 ರ ಇಂದಿರಾ ಸಹಾನಿ ಕೇಸನ್ನು ಉಲ್ಲೇಖಿಸಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬ ಅಂಶವನ್ನು ವಿವರಿಸಿದರು.

ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ( EWS) ಮೀಸಲಾತಿ ಕಲ್ಪಿಸಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಸಂವಿಧಾನದ ಆರ್ಟಿಕಲ್ ( 15)(16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಎಂದಿದೆ.

ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ವಾಗಿದೆ, ಕೆಲವರು ತಪ್ಪು ಗ್ರಹಿಕೆಯಿಂದ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಬೇಸರಪಟ್ಟರು‌

ಹಿಂದುಳಿದ ಜಾತಿಗಳಲ್ಲೂ ತಾರತಮ್ಯ ಅಸಮಾನತೆ ಇದೆ ಇದನ್ನು ಒಂದೇ ಬಾರಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಲೆಮಾರಿ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ ಅಲೆಮಾರಿ ಆಯೋಗ ರಚನೆಗೆ ಉಂಟಾಗಿರುವ ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.