ಬೆಂಗಳೂರು: ಬೆಂಗಳೂರಿನ ಮಾಗಡಿ ರಸ್ತೆ ಬಳಿ ನಿರ್ಮಾಣ ಹಂತದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆ ಬೆಂಕಿಗೆ ಆಹುತಿಯಾದರೆ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.
ಮಾಗಡಿ ರಸ್ತೆ ಕಡಬಗೆರೆ ಬಳಿಯ ಶಿವಾನಿ ಗ್ರೀನ್ಸ್ ಲೇಔಟ್ ನಲ್ಲಿ ಈ ಅವಘಡ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಉದಯ್ ಬಾನು ಹಾಗೂ ಬಿಹಾರ ಮೂಲದ ರೋಷನ್ ಮಾಡರ್ ಬೆಂಕಿಯ ಕೆನ್ನಾಲಿಗೆಗೆ ಸಜೀವ ದಹನವಾ ದುರ್ದೈವಿಗಳು.
ಸತೀಶ್ ಎಂಬವರು ಐಶಾರಾಮಿ ಮೂರು ಅಂತಸ್ತಿನ ಮನೆ ನಿರ್ಮಿಸುತ್ತಿದ್ದರು. ಇಂದು ಸಂಜೆ ಎರಡನೆ ಮಹಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆಗೆ ಬೆಂಕಿಯ ಜ್ವಾಲೆ ಆವರಿಸಿ ಸಂಪೂರ್ಣ ಸುಟ್ಟುಹೋಗಿದೆ.
ಮನೆಯಲ್ಲಿ ಎಂಟು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು.ಸಿಲಿಂಡರ್ ಸ್ಪೋಟಗೊಂಡಾಗ ಮನೆ ನಿರ್ಮಾಣದ ಮರದ ತುಂಡುಗಳಿಗೆ ಬೆಂಕಿ ಹೊತ್ತಿಕೊಂಡು ಇಡೀ ಮನೆ ಆವರಿಸಿದೆ.ಆರು ಕಾರ್ಮಿಕರು ಹೊರಗೆ ಓಡಿಬಂದು ಬಚಾವಾಗಿದ್ದಾರೆ.ಆದರೆ ಇಬ್ಬರು ಸುಟ್ಟು ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಅಧಿಕಾರಿ ಕಿಶೋರ್ ಮತ್ತು ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿ,ರಕ್ಷಣಾ ಕಾರ್ಯ ನಡೆದರೂ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿಲ್ಲ.
ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು.