ಎಂಜಿ ರಸ್ತೆಯಲ್ಲಿ ರೈತರಿಗೆ ಗೂಂಡಾಗಳಿಂದ ಕಿರುಕುಳ:ಇಂಗಲಗುಪ್ಪೆ ಕೃಷ್ಣೇಗೌಡ ಆರೋಪ

ಮೈಸೂರು : ವಿವಿಧ ಗ್ರಾಮಗಳಿಂದ ತರಕಾರಿ ಬೆಳೆದು ನಗರದ ಎಂಜಿ ರಸ್ತೆಯಲ್ಲಿ ವ್ಯಾಪಾರ ಮಾಡಲು ಬರುವ ರೈತರಿಗೆ ಗೂಂಡಾಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ)ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆರೋಪಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸರು ಕ್ರಮ ತೆಗೆದುಕೊಂಡು ರೈತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಮೈಸೂರು ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ರೈತರು ಸೊಪ್ಪು ತರಕಾರಿಗಳನ್ನು ಬೆಳೆದು ವ್ಯಾಪಾರ ಮಾಡಲು ಎಂಜಿ ರಸ್ತೆಯಲ್ಲಿರುವ ಮಾರುಕಟ್ಟೆಗೆ ಬರುತಗತಾರೆ. ಆದರೇ, ಇಲ್ಲಿನ ಕೆಲವು ಗೂಂಡಾಗಳು, ದಲ್ಲಾಳಿಗಳು ಮತ್ತು ಸ್ಥಳೀಯ ವ್ಯಾಪಾರಸ್ಥರು ರೈತರಿಗೆ ನೀವು ಬೆಳಗ್ಗೆ ಸೊಪ್ಪು ತರಕಾರಿ ತಂದು ಮಾರಬೇಡಿ, ಇದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ಅನಾನುಕೂವಾಗುತ್ತದೆ. ಮದ್ಯಾಹ್ನ ತನ್ನಿ ಎಂದು ಧಮಕಿ ಹಾಕುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಡಳಿತ ಮತ್ತು ಪೊಲೀಸರು ಕೂಡಲೇ ಇದನ್ನು ತಪ್ಪಿಸಿ, ಗೂಂಡಾಗಳ ವಿರುದ್ಧ ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸೊಪ್ಪು ತರಕಾರಿ ಮಾರುವ ಗ್ರಾಮೀಣ ಪ್ರದೇಶದ ರೈತರಿಂದ ಸುಂಕದ ನೆಪದಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆ. ಕೇಳಿದರೆ, ಕಾರ್ಪೋರೇಷನ್ ಅಧಿಕಾರಿಗಳಿಗೆ ಕೊಡಬೇಕು ಎನ್ನುತ್ತಾರೆ. ಈ ಸ್ಥಳದಲ್ಲಿ ವ್ಯಾಪಾರ ಮಾಡಲು ಎಲ್ಲ ರೈತರಿಗೂ ಮುಕ್ತ ಅವಕಾಶವಿದೆ. ಯಾವುದೇ ನೆಲಬಾಡಿಗೆ ನೀಡಬೇಕಿಲ್ಲ. ಆದರೂ ಅಕ್ರಮವಾಗಿ ಹಣವಸೂಲಿ ಮಾಡುತ್ತಾರೆ,ಈ ಬಗ್ಗೆ ಕಾರ್ಪೋರೇಷನ್ ಕಮೀಷನರ್ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹಸಿರು ಟವಲ್ ಹಾಕಿಕೊಂಡ ಕೆಲವು ರೈತಮುಖಂಡರು ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಿಸುತ್ತೇವೆ. ದರ್ಖಾಸ್ತು ಮೂಲಕ ಭೂಮಿ ಮಂಜೂರು ಮಾಡಿಸುತ್ತೇವೆ ಎಂದು ಹೇಳಿ ಎಕರೆಗೆ ೧ ರಿಂದ ೨ ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರು ಈ ಬಗ್ಗೆ ಗಂಭೀರವಾಗಿ ವಿಚಾರಣೆ ಮಾಡಿ ರೈತರನ್ನು ಮುಖಂಡರ ಸುಲಿಗೆಯಿಂದ ತಪ್ಪಿಸಬೇಕು ಇಲ್ಲದಿದ್ದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು
ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.

ಮೈಸೂರು ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದ್ದು, ಇದನ್ನು ತಡೆಯಬೇಕು ಮತ್ತು ಮೈಕ್ರೋಫೈನಾನ್ಸ್ ವ್ಯವಹಾರ ನಿರ್ಬಂಧಿಸಬೇಕೆಂದು ಕೃಷ್ಣೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೆಆರ್‌ಎಸ್ ರಾಮೇಗೌಡ, ಕೆ.ಹೆಚ್.ಕಂಠೀರವ, ಮಲ್ಲಿಕ್ ಆವರ್ತಿ,ದಯಾನಂದ, ಕೆಂಪರಾಜು, ಶಿವಪ್ರಸಾದ್,ಮಂಜುನಾಥ್, ರಾಜೇಗೌಡ, ಪುಟ್ಟಸ್ವಾಮನಾಯಕ, ಜ್ಯೋತಿ, ಚಂದ್ರಿಕಾ,ರಂಗಸ್ವಾಮಿ ನಾಯಕ, ಕಾಳಪ್ಪ, ರಘುನಾಥ್, ಕುಮಾರ್, ಜಯಶೀಲ, ಸಾವಿತ್ರಿ,ಚಿಕ್ಕನಂಜು ಮತ್ತಿತರರು ಉಪಸ್ಥಿತರಿದ್ದರು.