ಬೆಂಗಳೂರು:
ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡಬೇಕೆಂಬುದೇ ಕಾಂಗ್ರೆಸ್ ಸರ್ಕಾರದ ಒನ್ ಲೈನ್ ಅಜೆಂಡಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಾಲ ಮಾಡುವುದನ್ನೇ ಫುಲ್ ಟೈಂ ಕಾಯಕವನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತುತ ಕರ್ನಾಟಕದ ಒಟ್ಟು ಸಾಲವನ್ನು 6 ಲಕ್ಷ 65 ಸಾವಿರ ಕೋಟಿಗೆ ಮುಟ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಹೊರೆಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆಯ ಸೂಚ್ಯಂಕದಲ್ಲಿ, ಬಂಡವಾಳ ಹೂಡಿಕೆಯಲ್ಲಿ ನಂಬರ್ 1 ಆಗಿತ್ತು, ಆದರೆ ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅತಿ ಹೆಚ್ಚು ಸಾಲ ಮಾಡುವ ರಾಜ್ಯಗಳಲ್ಲಿ ನಂಬರ್ 1 ಆಗುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಜರಿದಿದ್ದಾರೆ.
ಹಿಂದಿನ ಅವಧಿಯಲ್ಲಿ ಕೇಂದ್ರದ ಎನ್ ಡಿ ಎ ಸರ್ಕಾರ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಮುಂದಾದಾಗ ಅದನ್ನ ವಿರೋಧಿಸಿ, ಬೀದಿ ರಂಪಾಟ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ಅದೇ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ.
ತನ್ನ ರಾಜಕೀಯ ಲಾಭಕ್ಕಾಗಿ ಅನ್ನದಾತರ ಹಿತಾಸಕ್ತಿಯನ್ನು ಬಲಿಕೊಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಅಶೋಕ್ ವ್ಯಂಗ್ಯ ವಾಡಿದ್ದಾರೆ.