ಮೈಸೂರು: ರಾಜ್ಯದ ವಿವಿಧೆಡೆ ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಮೈಸೂರು ಜಿಲ್ಲೆ,ನಂಜನಗೂಡಿನ ಮಳಿಗೆಯೊಂದರಲ್ಲಿ ಅಕ್ರಮವಾಗಿ ಯೂರಿಯಾ ಸಂಗ್ರಹಿಸಿಟ್ಟಿದ್ದುದು ಪತ್ತೆಯಾಗಿದೆ.
ಅಕ್ರಮವಾಗಿ ಯೂರಿಯಾ ಸಂಗ್ರಹಿಸಿಟ್ಟಿದ್ದ ದಾಸ್ತಾನು ಮಳಿಗೆ ಮೇಲೆ ರೈತಸಂಘ, ಹಸಿರುಸೇನೆ ಮುಖಂಡರು ಕೃಷಿ ಇಲಾಖೆ ಅಧಿಕಾರಿಗಳ ಜೊತೆ ದಾಳಿ ಮಾಡಿ 200 ಕ್ಕೂ ಹೆಚ್ಚು ಮೂಟೆ ರಾಸಾಯನಿಕ ಗೊಬ್ಬರ ವಶಪಡಿಸಿಕೊಂಡಿದ್ದಾರೆ.
ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆ, ಗೌಸಿಯಾ ರೈಸ್ ಮಿಲ್ ಗೊಡೌನ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಯೂರಿಯಾ ಪತ್ತೆಯಾಗಿದೆ.
ರಾಜ್ಯದ ರೈತರಿಗೆ ವಂಚಿಸಿ ನೆರೆ ರಾಜ್ಯಕ್ಕೆ ಸರಬರಾಜು ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಖಚಿತ ಮಾಹಿತಿಯ ಆಧರಿಸಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ವಿದ್ಯಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮತ್ತು ನಂಜನಗೂಡು ರೈತ ಸಂಘದ ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ಅವರುಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಅವರ ಗಮನಕ್ಕೆ ತಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ವೃತ ನಿರೀಕ್ಷಕ ಸುನಿಲ್ ಕುಮಾರ್ ಅವರ ಸಮ್ಮುಖದಲ್ಲಿ ದಾಸ್ತಾನು ಕೊಠಡಿಯ ಬೀಗ ಒಡೆದು ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 200 ಯೂರಿಯ ಗೊಬ್ಬರದ ಮೂಟೆಗಳು ಪತ್ತೆಯಾಗಿವೆ.
ನಂತರ ದಾಸ್ತಾನು ಮಳಿಗೆ ಮಾಲೀಕ ಮಹಮ್ಮದ್ ಫಾಝಿಲ್ ರೆಹಮನ್ ಎಂಬಾತನ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಜ್ಯದ ರೈತರು ಯೂರಿಯಾ ಕೊರತೆ ಎದುರಿಸುತ್ತಿದ್ದರೆ ಇಲ್ಲಿ ಇಷ್ಟೋಂದು ಗೊಬ್ಬರ ಸಂಗ್ರಹಿಸಿದ್ದಾರೆ ಕೂಡಲೇ ಸೂಕ್ತ ತೆನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತಮುಖಂಡರು ಒತ್ತಾಯಿಸಿದ್ದಾರೆ.