ದಾಖಲೆಯ 16ನೆ ಬಜೆಟ್: ಕೃಷಿಗೆ ಒತ್ತು ನೀಡಿದ ಸಿದ್ದು:51,339 ಕೋಟಿ ಅನುದಾನ ಪ್ರಕಟ

Spread the love

ಬೆಂಗಳೂರು,ಮಾ.7: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೆ ಬಜೆಟ್ ಮಂಡಿಸಿದ್ದು,ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡನೆಯನ್ನು ಬೆಳಿಗ್ಗೆ 10.15ಕ್ಕೆ‌ ಸರಿಯಾಗಿ ಪ್ರಾರಂಭಿಸಿ ಮಧ್ಯಾಹ್ನ1.45 ಕ್ಕೆ ಮುಕ್ತಾಯಗೊಳಿಸಿದರು.ಒಟ್ಟಾರೆ ಈ‌‌ ಬಾರಿ ಸಿದ್ದರಾಮಯ್ಯ ಮೂರೂವರೆ ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದರು.

ಬಜೆಟೆ ಮಂಡನೆಗೂ ಮೊದಲು
ಸನ್ಮಾನ್ಯ ಸಭಾಧ್ಯಕ್ಷರೆ,2025-26ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಲು ನಾನು ಹರ್ಷಿಸುತ್ತೇನೆ‌ ಎಂದು ಸಿದ್ದು ಹೇಳಿದರು.

ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ನಿಂತಿದ್ದೇನೆ ಎಂದು ತಿಳಿಸಿದರು.

ನಮ್ಮ ಕೈಬುಟ್ಟಿಯಲಿ
ಸಿಡಿಲ ಗೂಡಿಹುದು
ಹುಡುಕಿ ನೋಡಿದರಲ್ಲಿ
ಸುಮದ ಬೀಡಿಹುದು ಎಂಬ
ಕುವೆಂಪು ಅವರ ಕವನವನ್ನೂ ಸಿದ್ದು ವಾಚಿಸಿ ಸಭೆಯ ಗಮನ ಸೆಳೆದರು.

ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನುಡಿದಂತೆ ನಡೆಯುವ ನಮ್ಮ ವಾಗ್ದಾನವನ್ನು ಈ ಆಯವ್ಯಯ ಇನ್ನಷ್ಟು ದೃಢಪಡಿಸುತ್ತದೆ. ಆಯವ್ಯಯವು ಸುಸ್ಥಿರ ಮತ್ತು ನ್ಯಾಯಬದ್ಧ ಆರ್ಥಿಕತೆಯ ಮೂಲಕ ಪ್ರತಿಯೊಬ್ಬರ ಕಲ್ಯಾಣ ಸಾಧ್ಯವೆಂಬ ಮಹಾತ್ಮಾ ಗಾಂಧೀಜಿಯವರ ಆಶಯದ ಸ್ಪಷ್ಟ ದಿಕ್ಸೂಚಿಯಾಗಿದ್ದು,
ಸರ್ಕಾರದ ಸಾಮಾಜಿಕ, ಆರ್ಥಿಕ ಸಮಾನತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸಿಎಂ ಸಿದ್ದರಾಮಯ್ಯ ಕೃಷಿ ವಲಯಕ್ಕೆ ಈ ಬಾರಿ 51,339 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.

ಕಳೆದ ವರ್ಷ ಶೇ.4.9 ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು, 2024-25ರಲ್ಲಿ ಶೇ. 4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿತು. ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ಮುಂಗಾರು ಬಿತ್ತನೆಗೆ ಸರ್ಕಾರದ ಸಕಾರಾತ್ಮಕ ಕ್ರಮಗಳೊಂದಿಗೆ ಉತ್ತಮ ಮುಂಗಾರು ಮತ್ತು ಜಲಾಶಯಗಳು ಭರ್ತಿಯಾಗಿದ್ದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಲು ಕಾರಣವಾಗಿದೆ.

ರಾಜ್ಯ ಸರ್ಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳಿಗೆ ಕಳೆದ ವರ್ಷ 44,000 ಕೋಟಿ ರೂ. ನೀಡಿದ್ದು ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ಈ ಬಾರಿಯ ಬಜೆಟ್ ಅಭಿವೃದ್ಧಿಯ ಬಜೆಟ್ ಆಗಿದೆ, ಈ ಸಲ ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾಲವೂ ಇದೆ,ಆದರೆ ವಿತ್ತೀಯ ಶಿಸ್ತಿನೊಳಗೆ ಇದೆ,ಜಿಎಸ್‌ಡಿಪಿ ಶೇ.25 ರೊಳಗೆ ಇದೆ ಎಂದು ತಿಳಿಸಿದರು.

ಈ ಬಾರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಿದ್ದು‌ ವಿಶೇಷ, ಬಜೆಟ್ ಗಾತ್ರ 4.09 ಲಕ್ಷ ಕೋಟಿ ಇದೆ. ಕಳೆದ ಬಾರಿಯ ಬಜೆಟ್ ಗಾತ್ರ 3.71 ಲಕ್ಷ ಕೋಟಿ ಇತ್ತು.