ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಫೆಬ್ರವರಿವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಸ್ವಾಭಾವಿಕ ತಿರುಗುವಿಕೆಯ ಕಾರಣದಿಂದ ಉತ್ತರದ ಶೀತ ಮಾರುತಗಳು ದಕ್ಷಿಣದ ರಾಜ್ಯಗಳ ಕಡೆ ಅಧಿಕ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ತೀವ್ರ ಚಳಿಯ ವಾತಾವರಣ ಸೃಷ್ಟಿಯಾಗಿದೆ.
ಡಿ.೧೫ರಂದು ಈ ತಿರುಗುವಿಕೆಯ ವ್ಯಾಪ್ತಿ ವಿಸ್ತಾರಗೊಂಡು ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಬೀಸಲು ಆರಂಭವಾಗಲಿದೆ. ಇದರಿಂದ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುವ ಲಕ್ಷಣಗಳಿವೆ.
ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಅತೀ ಕಡಿಮೆ ತಾಪಮಾನ ದಾಖಲಾಗುತ್ತಿದೆ. ದಕ್ಷಿಣದ ಜಿಲ್ಲೆಗಳಲ್ಲಿಯೂ ತಾಪಮಾನ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮಡಿಕೇರಿಯಲ್ಲಿ ಕನಿಷ್ಠ ೧೦ರಿಂದ ೧೨ ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ ಕಂಡುಬರುತ್ತಿದ್ದು, ರಾತ್ರಿ ಮತ್ತು ಬೆಳಗಿನ ಜಾವ ಮನೆಯಿಂದ ಹೊರಬರುವುದು ಕಷ್ಟವಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಚಳಿಯ ವಾತಾವರಣಕ್ಕೆ ಕೆಲ ಪ್ರವಾಸಿಗರು ಮನಸೋತರೆ, ಮತ್ತೆ ಕೆಲವರು ವಿಪರೀತ ಚಳಿಗೆ ಹೆದರುತ್ತಿದ್ದಾರೆ.
ಶೀತ ವಾತಾವರಣಕ್ಕೆ ಫೈರ್ ಕ್ಯಾಂಪ್, ಹೀಟರ್, ಸ್ವೆಟರ್, ಟೋಪಿ, ಸಾಕ್ಸ್ ಮೊರೆ ಹೋಗುತ್ತಿದ್ದಾರೆ. ಆದರೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ವಿಭಿನ್ನ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ.
ಮಂಜು ಮುಸುಕಿದ ಮಂಜಿನ ನಗರಿ!