ಮೈಸೂರು: ಗಾಂಜಾ ಮತ್ತಿನಲ್ಲಿ ಪ್ರಾರಂಭವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆ ನಿವಾಸಿ ಕಲಾಂ ಅಲಿಯಾಸ್ ಮಹಮ್ಮದ್ ರಫೀಕ್ (24) ಕೊಲೆಯಾದ ಯುವಕ.
ಔಹಿದ್ ಪಾಷ ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ,ಕಳೆದ ರಾತ್ರಿ ಈ ಘಟನೆ ನಡೆದಿದೆ.
ಮೃತ ಕಲಾಂಗೆ ನಿಶ್ಚಿತಾರ್ಥವಾಗಿದ್ದು, ಎರಡು ತಿಂಗಳಲ್ಲಿ ವಿವಾಹ ನೆರವೇರಬೇಕಿತ್ತು.
ಮೃತ ಕಲಾಂ ಆರೋಪಿ ಔಹಿದ್ ಪಾಷನಿಗೆ ಕೊಡಬೇಕಿದ್ದ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ, ಮೊಬೈಲ್ ನಲ್ಲಿ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದಾರೆ.
ನಂತರ ಶಿವಾಜಿ ರಸ್ತೆಗೆ ಔಹಿದ್ ಆಗಮಿಸಿದ್ದಾನೆ, ಶಿವಾಜಿ ರಸ್ತೆಯಲ್ಲಿ ಗುಂಪಿನಲ್ಲಿದ್ದ ಕಲಾಂ ತಲೆಗೆ ಔಹಿದ್ ದೊಣ್ಣೆಯಿಂದ ಥಳಿಸಿದ್ದಾನೆ.ಈ ವೇಳೆ ಬಲವಾದ ಪೆಟ್ಟು ಬಿದ್ದುದರಿಂದ ಕಲಾಂ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದಾನೆ.
ಕೂಡಲೇ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಾಂ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗಾಂಜಾ ಮತ್ತಿನಲ್ಲಿ ಗಲಾಟೆ;ಯುವಕನ ಕೊಲೆ